ADVERTISEMENT

ಬೀದರ್‌ ವಿಶ್ವವಿದ್ಯಾಲಯದ ಅತಿಕ್ರಮಣ ತಡೆಯಿರಿ: ರಾಜ್ಯಪಾಲರಿಗೆ ಭಗವಂತ ಖೂಬಾ ಮನವಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:31 IST
Last Updated 24 ನವೆಂಬರ್ 2025, 6:31 IST
ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು   

ಬೀದರ್‌: ಬೀದರ್‌ ವಿಶ್ವವಿದ್ಯಾಲಯದ ಜಮೀನು ಅತಿಕ್ರಮಣದ ಯತ್ನಗಳು ನಡೆದಿದ್ದು, ಅದನ್ನು ತಡೆದು ರಕ್ಷಿಸಬೇಕು ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ನಾನು ಸಚಿವನಿದ್ದಾಗ ಈ ವಿಶ್ವವಿದ್ಯಾಲಯವನ್ನು ಜಿಲ್ಲೆಗೆ ಮಂಜೂರು ಮಾಡಿಸಿದ್ದೆ. ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸರ್ವೇ ನಂಬರ್‌ 9ರಲ್ಲಿ 12 ಎಕರೆ 18 ಗುಂಟೆ, ಸರ್ವೇ ನಂಬರ್‌ 10ರಲ್ಲಿ 310 ಎಕರೆ ಜಮೀನು ವಿವಿ ಹೊಂದಿದೆ. ವಿವಿ ಜಮೀನು ಕಬಳಿಸುವ ಯತ್ನಗಳು ನಡೆದಿದ್ದು, ಸ್ವತಃ ವಿವಿಯವರು ನನಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಭೂದಾಖಲೆಗಳ ಇಲಾಖೆಯವರಿಗೆ, ಭಾಲ್ಕಿ ತಹಶೀಲ್ದಾರ್‌ಗೆ, ಬಸವಕಲ್ಯಾಣದ ಉಪವಿಭಾಗಾಧಿಕಾರಿಗೆ ಸರ್ವೇ ಮಾಡಿ, ಜಾಗದ ಗಡಿ ಗುರುತಿಸಿ ಕೊಡಲು ಮನವಿ ಮಾಡಿದ್ದಾರೆ. ಆದರೆ, ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ. ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಮತ್ತು ಪ್ರಭಾವಿಗಳ ಒತ್ತಡ ಇರುವುದರಿಂದ ಅಧಿಕಾರಿಗಳು ಸರ್ವೇಗೆ ಹಿಂದೇಟು ಹಾಕುತ್ತಿದ್ದಾರೆ. ಗಡಿ ಗುರುತಿಸಿ, ಅತಿಕ್ರಮಣವಾಗಿದ್ದರೆ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಇರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.