ADVERTISEMENT

ಶೈಕ್ಷಣಿಕ ಹಬ್‌ ಆಗಲಿದೆ ಬೀದರ್

ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪೂರೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 15:48 IST
Last Updated 26 ಜೂನ್ 2022, 15:48 IST
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಬೀದರ್‌: ಜಿಲ್ಲೆಯಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಇಲ್ಲಿಯ ವಿದ್ಯಾರ್ಥಿಗಳು ಸಾಧನೆಯ ಮೂಲಕವೇ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಬೀದರ್‌ ಮುಂದೊಂದು ದಿನ ಶೈಕ್ಷಣಿಕ ಹಬ್‌ ಆಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪೂರೆ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಲ್ಕಿ ತಾಲ್ಲೂಕಿನ ಕೋಸಮ್ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಿದ್ಧಾರೂಢ ಕಾಶೀನಾಥ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿರುವುದು ಸ್ಮರಣೀಯ. ಮೂರು ನಾಲ್ಕು ವರ್ಷಗಳಲ್ಲಿ ಯುಪಿಎಸ್‌ ಪರೀಕ್ಷೆಯಲ್ಲಿ ಹಲವರು ಉತ್ತೀರ್ಣರಾಗಿದ್ದಾರೆ. ಈ ವರ್ಷ ನಾಲ್ವರು ಸಾಧನೆ ಮಾಡಿದ್ದಾರೆ. ಇದು ಶೈಕ್ಷಣಿಕ ಕ್ರಾಂತಿಯ ಸಂಕೇತ ಎಂದು ಬಣ್ಣಿಸಿದರು.

ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ತಿರುವಿನ ಹಂತವಾಗಿದೆ. ಗಟ್ಟಿ ನಿರ್ಧಾರ ತೆಗೆದುಕೊಂಡು ಛಲದೊಂದಿಗೆ ಮುನ್ನುಗ್ಗುವ ಸಮಯ. ವಿದ್ಯಾರ್ಥಿಗಳು ದೇಶ ಸೇವೆ ಮಾಡುವ ದಿಸೆಯಲ್ಲಿ ಸಂಕಲ್ಪದೊಂದಿಗೆ ಸಾಧನೆ ಮಾಡಬೇಕು ಎಂದರು.

ಗೌರವ ಸನ್ಮಾನ ಸ್ವೀಕರಿಸಿದ ಯು.ಪಿ.ಎಸ್.ಸಿ.ಯಲ್ಲಿ ಸಾಧನೆ ತೋರಿದ ವಿನಯಕುಮಾರ ಗಾದಗೆ ಮಾತನಾಡಿ, ಬೀದರ್‌ಗೆ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಹಲವರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಬಾರಿ ನಾಲ್ವರು ಸಾಧನೆ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಳ್ಳಬೇಕು. ಸೋಲಿನ ಭಯ ಬೇಡ. ಹಲವು ಬಾರಿ ಹಿನ್ನಡೆ ಆದ ನಂತರವೇ ನಾನು ಉನ್ನತ ಮಟ್ಟದ ಸಾಧನೆ ಮಾಡಿದ್ದೇನೆ. ಪರಿಶ್ರಮ ಹಾಗೂ ಸತತ ಪ್ರಯತ್ನದ ಮೂಲಕ ಗುರಿ ಸಾಧಿಸಲು ಪ್ರಯತ್ನಿಸಬೇಕು. ಎಂದು ಕಿವಿಮಾತು ಹೇಳಿದರು.

ಸಾಧಕರ ವ್ಯಕ್ತಿತ್ವ ವಿಕಸನದಲ್ಲಿ ತಂದೆ, ತಾಯಿ ಪಾಲಕರ ಪಾತ್ರವೂ ಇರುತ್ತದೆ. ಜೀವನದಲ್ಲಿ ವಿನಯತೆ, ಸೌಜನ್ಯತೆ, ಸಮನ್ವಯತೆ ಇದ್ದರೆ ಜೀವನ ಸಮೃದ್ಧಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಟೊಣ್ಣೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು. ಕ್ರೀಡೆ, ಸಂಗೀತದಲ್ಲೂ ಪ್ರತಿಭೆಯನ್ನು ಮೆರೆಯಬೇಕು ಎಂದು ಹೇಳಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ‌ಬುಡಾ ಅಧ್ಯಕ್ಷ ಬಾಬು ವಾಲಿ, .ಅಬ್ದುಲ್ ಖದೀರ್, ರವೀಂದ್ರರಡ್ಡಿ ಮಾಲಿಪಾಟೀಲ, ಪ್ರತಿಭಾ ಚಾಮಾ, ಬಸವರಾಜ ಧನ್ನೂರು, ಶರಣಪ್ಪ ಮಿಠಾರೆ, ಬಾಲಾಜಿ ಬಿರಾದಾರ, ಶಿವಕುಮಾರ ಯಲಾಲ, ಶಿವಶಂಕರ ಕಾಮಶೆಟ್ಟಿ, ಅನಿಲಕುಮಾರ ಔರಾದೆ, ಸುನೀಲ ಪ್ರಭಾ, ರವಿ ಮೂಲಗೆ ಪಾಲ್ಗೊಂಡಿದ್ದರು.


ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪುರಸ್ಕೃತ ಗುರಮ್ಮ ಸಿದ್ದಾರಡ್ಡಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ಭಾಷಣ ಮಾಡಿದರು. ಭಾನು ಪ್ರಿಯ ಅರಳಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ನಾಗರಾಜ ಜೋಗಿ ಸಂಗೀತ ನಡೆಸಿಕೊಟ್ಟರು. ಚೆನ್ನಬಸವ ಹೇಡೆ ನಿರೂಪಿಸಿದರು. ಶಿವಕುಮಾರ ಕಟ್ಟಿ ಸ್ವಾಗತಿಸಿದರು. ಟೋಕರೆ ಶಿವಶಂಕರ ವಂದಿಸಿದರು.


.........................‘

ಮುಖ್ಯಾಂಶಗಳು

ಜಿಲ್ಲೆಯ 300 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಆಕರ್ಷಕ ನೃತ್ಯ ಪ್ರದರ್ಶಿಸಿದ ಸೃಷ್ಟಿ ಅಡಿಗ

ವಿದ್ಯಾರ್ಥಿಗಳ ಪಾಲಕರು, ಕನ್ನಡಾಭಿಮಾನಿಗಳು ಭಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.