
ಸೆಪ್ಟೆಂಬರ್‌ನಲ್ಲಿ ಭಾರಿ ಮಳೆ ಹಾಗೂ ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ ಅಪಾರ ನೀರು ಬಿಟ್ಟಿದ್ದರಿಂದ ಮಾಂಜ್ರಾ ತನ್ನ ವ್ಯಾಪ್ತಿ ಮೀರಿ ಹರಿಯಿತು
ಬೀದರ್: 2025ನೇ ಸಾಲು ಬೀದರ್ ಜಿಲ್ಲೆಯ ಪಾಲಿಗೆ ಮಳೆಯ ವರ್ಷ ಎಂದೇ ಹೇಳಬಹುದು.
ವರ್ಷದ ಹೆಚ್ಚಿನ ದಿನಗಳು ಜಿಲ್ಲೆಯ ಬಹುತೇಕ ಭಾಗಗಳು ಮಳೆಗೆ ಸಾಕ್ಷಿಯಾದವು.
ಈ ವರ್ಷ ಏಪ್ರಿಲ್‌ನಲ್ಲಿ ಶುರುವಾದ ಮಳೆ ಅಕ್ಟೋಬರ್‌ವರೆಗೆ ಸುರಿಯಿತು. ಏಪ್ರಿಲ್, ಮೇ ತಿಂಗಳಲ್ಲೂ ಉತ್ತಮ ಮಳೆಯಾದ ಕಾರಣ ಜನರಿಗೆ ಬೇಸಿಗೆ ಕಾಲದ ಬಿಸಿಲಿನ ಅನುಭವ ಹೆಚ್ಚೇನೂ ಆಗಲಿಲ್ಲ.
ಆದರೆ, ಜೂನ್‌ನಲ್ಲಿ ಜಿಲ್ಲೆಗೆ ಆಗಮಿಸಿದ ವರುಣ ಅಕ್ಟೋಬರ್ ವರೆಗೆ ತಳವೂರಿದ. ನಿರಂತರವಾಗಿ ಸುರಿದ ಭಾರಿ ಮಳೆ ಹಾಗೂ ನೆರೆಯ ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಪರಿಣಾಮ ಮಾಂಜ್ರಾ, ಕಾರಂಜಾ ನದಿಗಳು ತನ್ನ ವ್ಯಾಪ್ತಿ ಮೀರಿ ಹರಿದವು. ಜಿಲ್ಲೆಯ ಭಾಲ್ಕಿ ಹಾಗೂ ಹುಲಸೂರ ತಾಲ್ಲೂಕಿನ ಅನೇಕ ಗ್ರಾಮಗಳು ಕೆಲವು ದಿನಗಳವರೆಗೆ ದ್ವೀಪಗಳಾಗಿ ಮಾರ್ಪಟ್ಟಿದ್ದವು. ಹಲವು ದಿನಗಳವರೆಗೆ ಸಂಪರ್ಕ ಕಡಿತಗೊಂಡಿತ್ತು. ಔರಾದ್, ಕಮಲನಗರ ಹಾಗೂ ಬೀದರ್ ತಾಲ್ಲೂಕಿನ ಹಲವು ಗ್ರಾಮಗಳಿಗೆ ಇದರ ಬಿಸಿ ತಟ್ಟಿತು.
ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ಸರಾಸರಿಗಿಂತ ಅಧಿಕ ಮಳೆಯಾಯಿತು. ಬೆವರು ಸುರಿಸಿ ಬೆಳೆದ ಬೆಳೆ ರೈತರ ಕಣ್ಣುದುರಲ್ಲೇ ಮಣ್ಣು ಪಾಲಾಯಿತು. ಅವರ ಬೆಳೆಯೊಂದಿಗೆ ಜಮೀನಿನ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಯಿತು. ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು, ಕೆರೆ ಕಟ್ಟೆಗಳು ಒಡೆದ ಪರಿಣಾಮ ಜಿಲ್ಲೆಯ ಮೂಲಸೌಕರ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಜಾನುವಾರುಗಳು ಕೊಚ್ಚಿ ಹೋದವು. ಹಿರಿಯ ರೈತರ ಪ್ರಕಾರ, ಮೂರು ದಶಕಗಳ ನಂತರ ಇಷ್ಟೊಂದು ಭಾರಿ ಮಳೆಯಾಗಿದೆ. ಇದರ ಪರಿಣಾಮ ಒಂದು ಅಂದಾಜಿನ ಪ್ರಕಾರ, ₹ 500 ಕೋಟಿಗೂ ಹೆಚ್ಚು ಹಾನಿ ಸಂಭವಿಸಿತು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ 1,86,426 ರೈತರ ಖಾತೆಗಳಿಗೆ 17 ಹಂತಗಳಲ್ಲಿ ಒಟ್ಟು ₹ 261.43 ಕೋಟಿ ಪರಿಹಾರ ರಾಜ್ಯ ಸರ್ಕಾರ ವಿತರಿಸಿ, ಸಂಕಷ್ಟಕ್ಕೀಡಾದ ರೈತರಿಗೆ ಸ್ಪಂದಿಸುವ ಕೆಲಸ ಮಾಡಿತು.
ಎಲ್ಲದಕ್ಕೂ ರೈತರ ಹೋರಾಟ: ಅತಿವೃಷ್ಟಿಯ ಪರಿಹಾರಕ್ಕೆ ಸತತ ಆಗ್ರಹ, ಹೋರಾಟ ನಡೆಸಿದ ರೈತರು ಕಬ್ಬಿನ ಬೆಂಬಲ ಬೆಲೆಗಾಗಿ ಪಟ್ಟು ಹಿಡಿದು ಹೋರಾಡಿದರು. ಇತರೆ ಜಿಲ್ಲೆಗಳಂತೆ ಕಬ್ಬಿಗೆ ಬೆಲೆ ಸಿಗಲಿಲ್ಲ. ಆದರೆ, ಅವರ ಹೋರಾಟದಿಂದ ಸಕ್ಕರೆ ಕಾರ್ಖಾನೆಗಳು ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ ₹ 2,950 ಕೊಡಲು ಒಪ್ಪಿದವು. ಇದು ರೈತರ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ.
ಈ ವಿಷಯದಲ್ಲಿ ವಿರೋಧ ಪಕ್ಷಗಳು ರೈತರ ಬೆನ್ನಿಗೆ ನಿಂತವು. ಆದರೆ, ರೈತರು ರಾಜಕಾರಣದಿಂದ ದೂರವೇ ಉಳಿದು ಅವರ ಹಕ್ಕಿಗಾಗಿ ಹೋರಾಟ ನಡೆಸಿದರು. ಆಯಾ ಸಂದರ್ಭಗಳಿಗಷ್ಟೇ ರೈತರಲ್ಲಿ ಕ್ಷಣಿಕ ಒಗ್ಗಟ್ಟು ಕಂಡು ಬಂತು. ಆದರೆ, ಸಂಘಟಿತ ಹೋರಾಟದ ಕೊರತೆ ಎದ್ದು ಕಂಡಿತು.
ರಾಜ್ಯೋತ್ಸವ ಗರಿ: ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಗಾಯಕ ಮಡಿವಾಳಯ್ಯ ಶಿವಲಿಂಗಯ್ಯ ಸಾಲಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿಯಿತು.
ಬೆಚ್ಚಿಬೀಳಿಸಿದ ಎಟಿಎಂ ದರೋಡೆ ಘಟನೆ
ಬೀದರ್‌ನ ಜಿಲ್ಲಾ ನ್ಯಾಯಾಲಯ ಸಮೀಪದ ಎಸ್‌ಬಿಐ ಬ್ಯಾಂಕಿನ ಎದುರು ಜನವರಿ 16ರಂದು ನಡೆದ ದರೋಡೆ ಪ್ರಕರಣವು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು.
ಇಬ್ಬರು ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಗುಂಡಿನ ದಾಳಿ ನಡೆಸಿ, ಕೊಲೆಗೈದು ಹಣ ದರೋಡೆ ಮಾಡಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಸಿಎಂಎಸ್ ಕಂಪನಿಯ ‘ಕ್ಯಾಶ್ ಕಸ್ಟೋಡಿಯನ್’ಗಳಾಗಿದ್ದ ಚಿದ್ರಿ ನಿವಾಸಿ ಗಿರಿ ವೆಂಕಟೇಶ ಸ್ಥಳದಲ್ಲೇ ಗುಂಡೇಟಿಗೆ ಮೃತಪಟ್ಟಿದ್ದರು. ಲಾಡಗೇರಿಯ ನಿವಾಸಿ ಶಿವಕುಮಾರ ಅವರು ಗಾಯಗೊಂಡಿದ್ದರು. ಎಟಿಎಂಗಳಿಗೆ ಹಣ ಜಮೆ ಮಾಡಲು ಎಸ್‌ಬಿಐ ಬ್ಯಾಂಕಿನಿಂದ ಟ್ರಂಕ್ ತೆಗೆದುಕೊಂಡು ಜೀಪಿನೊಳಗೆ ಇರಿಸುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅವರ ಮೇಲೆ ಎರಗಿ, ಕಣ್ಣಿಗೆ ಖಾರದ ಪುಡಿ ಎರಚಿ ಗುಂಡಿನ ದಾಳಿ ನಡೆಸಿದ್ದರು. ಬಳಿ ಟ್ರಂಕ್ ಸಮೇತ ಬೈಕ್ ಮೇಲೆ ಕುಳಿತು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ನಿರ್ಗಮಿಸಿದ್ದರು. ದರೋಡೆಕೋರರ ಬಂಧನಕ್ಕೆ ಜಿಲ್ಲಾ ಪೊಲೀಸರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದುವರೆಗೆ ಯಶ ಸಿಕ್ಕಿಲ್ಲ.
ಖಂಡ್ರೆ–ಖೂಬಾ ಕೆಸರೆರೆಚಾಟ
ಬೀದರ್ ಜಿಲ್ಲೆಯಲ್ಲಿ ಬದ್ಧ ರಾಜಕೀಯ ವೈರಿಗಳೆಂದೇ ಗುರುತಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಭಗವಂತ ಖೂಬಾ ನಡುವಿನ ಕೆಸರೆರೆಚಾಟ 2025ನೇ ಸಾಲಿನುದ್ದಕ್ಕೂ ನಡೆಯಿತು.
ಬೆಳೆ ವಿಮೆ, ಅಭಿವೃದ್ಧಿ, ರೈತರಿಗೆ ಪರಿಹಾರ ಕೊಡಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಇಬ್ಬರು ಪರಸ್ಪರ ಟೀಕೆ, ಟಿಪ್ಪಣಿ ಮಾಡುತ್ತ ಚರ್ಚೆಯ ಕೇಂದ್ರವಾದರು. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭಗವಂತ ಖೂಬಾ ಅವರು ಈಶ್ವರ ಬಿ. ಖಂಡ್ರೆ ಅವರನ್ನು ಸೋಲಿಸಿದ್ದರು. 2024ರಲ್ಲಿ ನಡೆದ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರು ತಮ್ಮ ಮಗ ಸಾಗರ್ ಖಂಡ್ರೆ ಅವರನ್ನು ಚುನಾವಣೆಗೆ ನಿಲ್ಲಿಸಿ, ಭಗವಂತ ಖೂಬಾ ಅವರನ್ನು ಸೋಲಿಸಿ ಮುಯ್ಯಿ ತೀರಿಸಿಕೊಂಡರು.
ಬಿಜೆಪಿ ಸಕ್ರಿಯ, ಕಾಂಗ್ರೆಸ್–ಜೆಡಿಎಸ್ ನಿಷ್ಕ್ರಿಯ
2025ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಂಡಿತು. ರಾಜ್ಯ ಸರ್ಕಾರದ ವೈಫಲ್ಯ, ಜಿಲ್ಲಾ ಆಡಳಿತದ ವೈಫಲ್ಯ, ಜಿಲ್ಲೆಯ ಇಬ್ಬರು ಸಚಿವರ ವಿರುದ್ಧ ಅನೇಕ ಹೋರಾಟಗಳನ್ನು ಸಂಘಟಿಸಿ ಬೀದಿಗಿಳಿಯಿತು. ಜಿಲ್ಲೆಯಲ್ಲಿ ನಡೆದ ಬಹುತೇಕ ವಿಷಯಗಳಿಗೆ ಬಿಜೆಪಿ ತನ್ನ ಹೋರಾಟದ ಅಸ್ತ್ರವಾಗಿ ಮಾಡಿಕೊಂಡಿತು. ಅತಿ ಹೆಚ್ಚು ಹೋರಾಟ, ಪ್ರತಿಭಟನೆ, ಪತ್ರಿಕಾಗೋಷ್ಠಿಗಳನ್ನು ನಡೆಸಿ ಬಿಜೆಪಿ ಇತರೆ ರಾಜಕೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇತ್ತು. ಆದರೆ, ಈ ಚುರುಕುತನ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳಲ್ಲಿ ಕಾಣಿಸಲಿಲ್ಲ.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಹಾಗೂ ಇತರೆ ಜಿಲ್ಲೆಗಳಲ್ಲಿ ನಡೆದ ಹೋರಾಟಗಳನ್ನು ಗಮನಿಸಿದರೆ ಜಿಲ್ಲಾ ಕಾಂಗ್ರೆಸ್ ಬಹಳ ಹಿಂದೆ ಇದ್ದದ್ದು ಕಂಡು ಬಂತು. ಜೆಡಿಎಸ್ ಪಕ್ಷವಂತೂ ಅದರ ಮುಖಂಡರು ಜಿಲ್ಲೆಗೆ ಬಂದಾಗಲಷ್ಟೇ ಅದರ ಚಟುವಟಿಕೆಗಳು ನಡೆದವು.
ವರ್ಷದಲ್ಲಿ ಒಂದು ಬಂದ್
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ 2025ರ ಜನವರಿ 9ರಂದು ಸ್ವಾಭಿಮಾನಿ ಡಾ. ಬಿ.ಆರ್. ಅಂಬೇಡ್ಕರ್‌ವಾದಿಗಳ ಹೋರಾಟ ಸಮಿತಿ ಬೀದರ್ ಬಂದ್‌ಗೆ ಕರೆ ಕೊಟ್ಟಿತು. ವರ್ಷದಲ್ಲಿ ಬಂದ್ ಆಗಿದ್ದು ಇದೊಂದೇ ದಿನ. ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಆ ದಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿತು.
ಇನ್ನುಳಿದಂತೆ ಕಾರಂಜಾ ಸಂತ್ರಸ್ತರು ತಮ್ಮ ಹಕ್ಕಿಗಾಗಿ ಸುದೀರ್ಘ ಹೋರಾಟ ನಡೆಸಿ, ಸರ್ಕಾರದ ಆಶ್ವಾಸನೆ ಬಳಿಕ ವರ್ಷಕ್ಕೂ ಹೆಚ್ಚು ದಿನ ನಡೆಸಿದ ಧರಣಿಯನ್ನು ಕೈಬಿಟ್ಟರು. ರೈತರು ಸಾಲ ಮನ್ನಾ, ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟ ನಡೆಸಿದರು.
ಒಬ್ಬ ಸಚಿವರು ಚುರುಕು, ಇನ್ನೊಬ್ಬರು ನಿಧಾನ
ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಿಂದ ಈಶ್ವರ ಬಿ. ಖಂಡ್ರೆ ಹಾಗೂ ರಹೀಂ ಖಾನ್ ಅವರು ಸಂಪುಟ ದರ್ಜೆ ಸಚಿವರಾದರು.
ಅಂದಿನಿಂದ ಇಂದಿನವರೆಗೆ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಖಂಡ್ರೆ ಅವರು ಒಂದು ದಿನವೂ ವಿಶ್ರಮಿಸದೇ ರಾಜ್ಯದಾದ್ಯಂತ ಓಡಾಡಿ ಅರಣ್ಯ ಆಸ್ತಿ ಸಂರಕ್ಷಣೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಂಡರು. ಜಿಲ್ಲೆಯಲ್ಲೂ ಅದೇ ಚುರುಕುತನ ಕಂಡು ಬಂತು. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದಾಗಲೂ ಎಲ್ಲೆಡೆ ಓಡಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಸಿದರು. ಪಕ್ಷ ಹಾಗೂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕಿಸಿದಾಗ ಇವರೊಬ್ಬರೇ ಅದಕ್ಕೆ ಕಾಲಕಾಲಕ್ಕೆ ಉತ್ತರ ಕೊಡುತ್ತ ಬಂದರು. ಮೇಲಿಂದ ಮೇಲೆ ಸಭೆಗಳು, ಗಂಟೆಗಟ್ಟಲೇ ಸಭೆ ನಡೆಸಿ, ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದರು. ಭಾಲ್ಕಿಗಂತೂ ಹಲವು ಯೋಜನೆಗಳನ್ನು ಮಂಜೂರು ಮಾಡಿಸಿ, ತನ್ನ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸಿದರು.
ಆದರೆ, ಇದೇ ಚುರುಕುತನ ಸಚಿವ ರಹೀಂ ಖಾನ್ ಅವರಲ್ಲಿ ಕಂಡು ಬರಲಿಲ್ಲ. ಪೌರಾಡಳಿತ ಸಚಿವರಾದರೂ ಬೀದರ್ ಉತ್ತರ (ನಗರ ಪ್ರದೇಶ ಹೆಚ್ಚಿನ ವ್ಯಾಪ್ತಿ) ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಳಾಗಲಿಲ್ಲ. ಹೆಚ್ಚಿನ ವಾರ್ಡ್‌ಗಳತ್ತ ಅವರು ತಿರುಗಿ ನೋಡಲಿಲ್ಲ. ಅಧಿಕಾರಿಗಳ ಸಭೆ ನಡೆಸಿದ್ದು ತೀರ ವಿರಳ. ಅಭಿವೃದ್ಧಿಯೇ ಇಚ್ಛಾಶಕ್ತಿಯೇ ಅವರಲ್ಲಿಲ್ಲ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.
ವರ್ಷದ ಪ್ರಮುಖ ಘಟನಾವಳಿಗಳು
ಜನವರಿ
* 18ರಂದು ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಐವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಫೆಬ್ರುವರಿ
* 10ರಿಂದ ಮೂರು ದಿನಗಳ ವಚನ ವಿಜಯೋತ್ಸವ
* 16ರಂದು ಬಿದ್ರಿ ಕಲಾವಿದ ಮುಹಮ್ಮದ್ ಅಬ್ದುಲ್ ರೌಫ್ ನಿಧನ
* 21ರಂದು ಉತ್ತರ ಪ್ರದೇಶದ ವಾರಾಣಸಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಗರದ ಲಾಡಗೇರಿಯ ಒಂದೇ ಕುಟುಂಬದ ಮೂವರು ಸೇರಿದಂತೆ ಐದು ಜನ ಸಾವನಪ್ಪಿ, ಒಂಬತ್ತು ಜನ ಗಂಭೀರವಾಗಿ ಗಾಯಗೊಂಡರು. ಮಹಾಕುಂಭಮೇಳದ ಪುಣ್ಯಸ್ನಾನಕ್ಕೆ ತೆರಳಿದ್ದರು.
ಮಾರ್ಚ್
* 2ರಂದು ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ
* 3ರಂದು ವಿಧಾನ ಪರಿಷತ್ ಮಾಜಿ ಸದಸ್ಯ ಕಾಜಿ ಅರ್ಷದ್ ಅಲಿ ನಿಧನ
* 25ರಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ
ಏಪ್ರಿಲ್
* 10ರಂದು ಮುಂಗಾರು ಪೂರ್ವ ಮಳೆಯ ಆರ್ಭಟ
* 15ರಂದು ಸಿವಿಲ್ ಜಡ್ಜ್ ಮನೆಯ ಕಳ್ಳತನ ಪ್ರಕರಣ ಭೇದಿಸಿದ ಬೀದರ್ ಜಿಲ್ಲಾ ಪೊಲೀಸರು; ಪಾರ್ದಿ ಗ್ಯಾಂಗ್‌ನ ಮೂವರ ಬಂಧನ
* 16ರಂದು ಬೀದರ್‌ನಲ್ಲಿ ₹2,025 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
* 17ರಂದು ನಡೆದ ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆಗೆ ತೆರಳಿದ್ದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿ ಸುಚಿವ್ರತ್ ಅವರಿಗೆ ಜನಿವಾರ ಕಳಚಲು ತಾಕೀತು ಮಾಡಿದ್ದರಿಂದ ವಿದ್ಯಾರ್ಥಿ ಮನನೊಂದು ಪರೀಕ್ಷೆಗೆ ಗೈರು ಹಾಜರಾದರು. ಈ ಘಟನೆ ರಾಜ್ಯದಾದ್ಯಂತ ಭಾರಿ ಟೀಕೆ ವ್ಯಕ್ತವಾಯಿತು. ಬ್ರಾಹ್ಮಣ ಸಮಾಜದಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಿತು. ಘಟನೆ ಸಂಬಂಧ ಖಾಸಗಿ ಕಾಲೇಜಿನ ಇಬ್ಬರನ್ನು ವಜಾಗೊಳಿಸಲಾಯಿತು.
* 25ರಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್‌ನವರು ನಡೆಸಿದ ಪ್ರತಿಭಟನೆಯಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತರ
ಮೋರ್ಚಾ ಪ್ರಧಾನ ಕಾರ್ಯದರ್ಶಿ ರೌಫೊದ್ದೀನ್ ಕಚೇರಿವಾಲೆ ಅವರನ್ನು ಆರು ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು.
* 28ರಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡ ಖಂಡಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸಾವಿರಾರು ಜನ ರ್‍ಯಾಲಿ ನಡೆಸಿದರು
ಮೇ
* 2ರಂದು ಬೀದರ್ ನಗರದ ಓಲ್ಡ್ ಆದರ್ಶ ಕಾಲೊನಿಯಲ್ಲಿ ಏ. 26ರಂದು ನಡೆದ ಡಕಾಯಿತಿ ಪ್ರಕರಣದ ಮೂವರು ಆರೋಪಿಗಳನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದರು. ಘಟನೆ ವೇಳೆ ಡಕಾಯಿತನೊಬ್ಬ ಹೆಡ್ ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ
* 9ರಂದು ಬೀದರ್ ನಗರದ ಡಿಸಿಸಿ ಬ್ಯಾಂಕಿಗೆ ಸುಳ್ಳು ಮಾಹಿತಿ ಕೊಟ್ಟು, ಸಾರ್ವಜನಿಕರ ಹಣ ವಂಚಿಸಿರುವ ಆರೋಪದಡಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಡಿ.ಕೆ. ಸಿದ್ರಾಮ ಅವರನ್ನು ಪೊಲೀಸರು ಬಂಧಿಸಿದರು
* 14ರಂದು ಬೀದರ್ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ, ಸುಲಿಗೆ ಹಾಗೂ ಮನೆಗಳವು ಪ್ರಕರಣವನ್ನು ಭೇದಿಸಿದ ಪೊಲೀಸರು ಚಿದ್ರಿ ಸಮೀಪದ ಖಾಸಗಿ ಶಾಲೆ ಶಿಕ್ಷಕ, ಆಟೊ ಚಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದರು
ಜೂನ್
* 8ರಂದು ಜಿಲ್ಲೆಯ ಕಮಲನಗರ ಪಟ್ಟಣ ಹೊರವಲಯದ ರಾಂಪೂರ ರಸ್ತೆಯಲ್ಲಿರುವ ಶೆಡ್ ವೊಂದರಲ್ಲಿ ನಡೆದ ಗೋಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದರು
ಜುಲೈ
* 16ರಂದು ‘ಬಿಲ್ಡ್ ಟೆಕ್–2025’ ಸಮ್ಮೇಳನ
* 18ರಂದು ಶಾಸಕ ಪ್ರಭು ಚವಾಣ್ ಅವರ ಮಗ ಪ್ರತೀಕ್ ಚವಾಣ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಾರಾಷ್ಟ್ರದ ದೇಗಲೂರ ತಾಲ್ಲೂಕಿನ ಸೇವಾದಾಸ ನಗರ ತಾಂಡಾದ ಯುವತಿಯೊಬ್ಬರು ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯದ ಗೃಹ ಸಚಿವರಿಗೆ ದೂರು ಸಲ್ಲಿಸಿದರು.
*19ರಂದು ಬೀದರ್ ಗುರುದ್ವಾರಕ್ಕೆ ಹುಸಿ ಇಮೇಲ್ ಬಾಂಬ್ ಬೆದರಿಕೆ
ಆಗಸ್ಟ್
* 17ರಂದು ಭಾರಿ ಮಳೆ, ಪ್ರವಾಹದಿಂದ ಸಂಕಷ್ಟ
* 28ರಂದು ಭಾರಿ ಮಳೆಗೆ ಬೀದರ್ ಕೋಟೆ ಗೋಡೆ ಕುಸಿತ
ಸೆಪ್ಟೆಂಬರ್
* 1ರಂದು ಗಣೇಶ ವಿಸರ್ಜನೆ ಮೆರವಣಿಗೆಗೆ ಸಾಕ್ಷಿಯಾದ ಅಪಾರ ಜನಸ್ತೋಮ
* 3ರಂದು ಬಸವ ಸಂಸ್ಕೃತಿ ಅಭಿಯಾನ
* 10ರಂದು ಪಶು ವಿವಿಯಲ್ಲಿ ₹32.26 ಕೋಟಿ ಅಕ್ರಮ ಆರೋಪ; ಲೋಕಾಯುಕ್ತದಿಂದ 69 ಕಡೆಗಳ ಮೇಲೆ ದಾಳಿ
* 13ರಂದು ಭ್ರಷ್ಟಾಚಾರ ಆರೋಪ; ಪಶು ವಿವಿ ಇಬ್ಬರು ನೌಕರರ ವಜಾ
* 13ರಂದು ಶಾಸಕ ಚವಾಣ್‌ಗೆ ವಾಟ್ಸ್ಆ್ಯಪ್ ಅಶ್ಲೀಲ ವಿಡಿಯೋ ಕಳಿಸಿದ ಆರೋಪಿ ಬಂಧನ
* 22ರಿಂದ ಅ. 2ರ ವರೆಗೆ ಬಸವಕಲ್ಯಾಣದಲ್ಲಿ ದಸರಾ ದರ್ಬಾರ್
* 24ರಂದು ಕಾಂಗ್ರೆಸ್ ಮುಖಂಡ ಬಾಬು ಹೊನ್ನಾ ನಾಯ್ಕ ಅವರನ್ನು ಭೀಮರಾಯನಗುಡಿ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತು
ಅಕ್ಟೋಬರ್
* 10ರಿಂದ 12ರ ವರೆಗೆ ಬಸವಕಲ್ಯಾಣದಲ್ಲಿ 24ನೇ ಕಲ್ಯಾಣ ಪರ್ವ
* 11ರಂದು ಶಾಹೀನ್ ಸಂಸ್ಥೆಯಿಂದ ಮಹಮೂದ್ ಗಾವಾನ್ ಮದರಸಾ ದತ್ತು ಸ್ವೀಕಾರ
* 12ರಂದು ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಪಥ ಸಂಚಲನ
* 31ರಂದು 2025-26ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಟೇಬಲ್ ಟೆನಿಸ್ ಪಂದ್ಯಾವಳಿಯ ಬಾಲಕ ಮತ್ತು ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು ದಕ್ಷಿಣ ತಂಡವು ಉತ್ತಮ ಸಾಧನೆ ತೋರಿ ಟ್ರೋಫಿ ಮುಡಿಗೇರಿಸಿಕೊಂಡಿತು
ನವೆಂಬರ್
* 5ರಂದು ಗುರುನಾನಕ್ ಜಯಂತಿ; ಬೀದರ್‌ನಲ್ಲಿ ಸಿಖ್ಖರಿಂದ ಭವ್ಯ ಮೆರವಣಿಗೆ
* 18ರಂದು ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಬೀದರ್ ನಗರದ ಮೈಲೂರಿನ ಸಿಎಂಸಿ ಕಾಲೊನಿಯ ನಿವಾಸಿ ರಹಮತ್‌ಬೀ (80) ಮೃತಪಟ್ಟರು
* 26ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಮರ್ಥ ಸೇವಾ ಸಂಸ್ಥೆಯ ಸಹಯೋಗದಲ್ಲಿ ಬೀದರ್‌ನಲ್ಲಿ ‘ಬೀದರ್ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ
* 30ರಂದು ಬೀದರ್ ಜಿಲ್ಲಾಮಟ್ಟದ ಮರಾಠಾ ಸ್ವಾಭಿಮಾನಿ ಸಮಾವೇಶ ಜರುಗಿತು. ಸಹಸ್ರಾರು ಜನ ಪಾಲ್ಗೊಂಡಿದ್ದರು
ಡಿಸೆಂಬರ್
* 7ರಂದು ಬಸವಕಲ್ಯಾಣದಲ್ಲಿ ಸೂಫಿ–ಸಂತರ ಸಮಾವೇಶ; ಕಾಂಗ್ರೆಸ್ ಸಮಾವೇಶ ಎಂದು ಬಿಜೆಪಿ ಟೀಕೆ
* 8ರಂದು ವಲಯ ಮಟ್ಟದ ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ; ಎಸ್‌ಬಿಆರ್ ಪಬ್ಲಿಕ್ ಶಾಲೆ ಪ್ರಥಮ
* 19ರಂದು ಗ್ರಾಮೀಣ ಸೊಗಡಿನ ರೈತಾಪಿ ವರ್ಗದ ಎಳ್ಳು ಅಮಾವಾಸ್ಯೆ ಹಬ್ಬ ಆಚರಣೆ
* 23ರಂದು ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮಾ ಶಾಮರಾವ್ ಅವರು ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.