
ಬೀದರ್: ಬ್ಲಾಕ್ ಗೋಲ್ಡ್ ಬಿದ್ರಿ ಕರಕುಶಲ ಉತ್ಪಾದಕರ ಕಂಪನಿ, ಅಭಿವೃದ್ಧಿ ಆಯುಕ್ತರ (ಹಸ್ತಶಿಲ್ಪ) ಕಚೇರಿ, ವಸ್ತ್ರ ಮಂತ್ರಾಲಯ ಪ್ರಾಯೋಜಿತ ಎನ್.ಎಚ್.ಡಿ.ಪಿ. ಯೋಜನೆಯಡಿ ಹಮ್ಮಿಕೊಂಡಿರುವ ಮೂರು ದಿನಗಳ ಕರಕುಶಲ ವಸ್ತುಗಳ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ನಗರದ ಪನ್ನಾಲಾಲ್ ಹೀರಾಲಾಲ್ ಪ್ರೌಢಶಾಲೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೊಳ್ಳಿ ಉದ್ಘಾಟಿಸಿ,‘ಬಿದ್ರಿ ಕಲೆ ಜಗತ್ಪ್ರಸಿದ್ಧ ವಿಶಿಷ್ಟ ಕರಕುಶಲ ವಸ್ತು. ಇಂತಹ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಕಲೆಯ ಬಗ್ಗೆ ಸಮಗ್ರ ಮಾಹಿತಿ ದೊರಕಲಿದೆ’ ಎಂದು ಹೇಳಿದರು.
ಧಾರವಾಡದ ಅಭಿವೃದ್ಧಿ ಆಯುಕ್ತರ (ಹಸ್ತಶಿಲ್ಪ) ಕಚೇರಿಯ ಸಹಾಯಕ ನಿರ್ದೇಶಕ ಕಿರಣ ವಿ.ಎನ್.ಮಾತನಾಡಿ,‘ ವಸ್ತ್ರ ಮಂತ್ರಾಲಯ, ಭಾರತ ಸರ್ಕಾರದ ಮಾರ್ಗದರ್ಶನದಲ್ಲಿ ದೇಶದಾದ್ಯಂತ ಕರಕುಶಲ ಉತ್ಪಾದಕರ ಕಂಪನಿಗಳನ್ನು ರಚಿಸಲಾಗುತ್ತಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಿದ್ರಿ ಕರಕುಶಲ ಉತ್ಪಾದಕರ ಕಂಪನಿ 2020ರಲ್ಲಿ ಬೀದರ್‌ನಲ್ಲಿ ಸ್ಥಾಪನೆಯಾಗಿದೆ. 2025–26ನೇ ಸಾಲಿನಲ್ಲಿ ಈ ಕಂಪನಿಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ಶಾಲಾ ಮಕ್ಕಳಿಗಾಗಿ ಮೂರು ದಿನಗಳ ಕರಕುಶಲ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಬ್ಲಾಕ್ ಗೋಲ್ಡ್ ಬಿದ್ರಿ ಕರಕುಶಲ ಉತ್ಪಾದಕರ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಶಫಿಯೊದ್ದೀನ್ ಮಾತನಾಡಿ,‘ಕಂಪನಿಯು 2020ರಲ್ಲಿ ನೋಂದಣಿಯಾಗಿದೆ. ಈ ವರ್ಷ ಈಗಾಗಲೇ ನಾಲ್ಕು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕರಕುಶಲ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದು ಹೇಳಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ಭೀಮಣ್ಣ, ಪನ್ನಾಲಾಲ್ ಹೀರಾಲಾಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬ್ರಿಜ್ ಕಿಶೋರ್ ಮಲಾನಿ, ಕರಕುಶಲ ಅಭಿವೃದ್ಧಿ ಅಧಿಕಾರಿ ಸುಶಾಂತ ಬಿ., ಪನ್ನಾಲಾಲ್ ಹೀರಾಲಾಲ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಧಾರಾಣಿ ಬಿರಾದಾರ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಫಿಯೊದ್ದೀನ್ ರೆಹಮಾನ್, ಫರ್ಜಾನ ಬೇಗಂ, ಶಾಹೀದಾ ಬೇಗಂ ಹಾಗೂ ಜಗದೀಶ ಕಾಂಬಳೆ ಭಾಗವಹಿಸಿ ಬಿದ್ರಿ ಮಹತ್ವ ವಿವರಿಸಿದರು. 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇವೇಂದ್ರಕುಮಾರ ಗಾಯಕವಾಡ್ ಸ್ವಾಗತಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.