ಹುಲಸೂರ: ಕೀಟನಾಶಕ, ರಾಸಾಯನಿಕ ಗೊಬ್ಬರದ ಬಳಕೆ ಹಾಗೂ ಇನ್ನಿತರ ಮಾನವ ಚಟುವಟಿಕೆಗಳಿಂದಾಗಿ ಗೀಜಗ ಹಕ್ಕಿ, ಗುಬ್ಬಚ್ಚಿ ಹಾಗೂ ಅವುಗಳ ಗೂಡುಗಳು ಅವನತಿ ಅಂಚಿಗೆ ಸರಿದಿವೆ. ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳ ಗಿಡಗಳಲ್ಲಿ, ಮಣ್ಣಿನ ಮನೆಗಳಲ್ಲಿ, ಬಾವಿಗಳಲ್ಲಿ ಗುಬ್ಬಚ್ಚಿ ಹಾಗೂ ಗೂಡುಗಳು ಕಣ್ಣಿಗೆ ಗೋಚರಿಸುತ್ತಿದ್ದವು. ಹಾಗೆಯೇ ಜಮೀನುಗಳಲ್ಲಿ ತೆನೆಗಳನ್ನು ತಿನ್ನಲು ಗುಂಪು ಗುಂಪಾಗಿ ಗೀಜಗ ಹಕ್ಕಿಗಳು ಬರುತ್ತಿದ್ದವು. ಈಗ ಅವರು ಎಲ್ಲಿವೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ತೆನೆ ತಿನ್ನಲು ಬರುವ ಗೀಜಗ ಹಕ್ಕಿಗಳನ್ನು ಹಾರಿಸಲು ರೈತರು ಜಮೀನುಗಳಲ್ಲಿ ಅಂಟಾ (ಮಂಚದ ಆಕಾರ) ನಿರ್ಮಾಣ ಮಾಡಿ, ಅದರ ಮೇಲೆ ನಿಂತು ಕವಣೆಯಲ್ಲಿ ಸಣ್ಣ ಕಲ್ಲುಗಳನ್ನು ಇಟ್ಟು ಗೀಜಗ ಹಕ್ಕಿ ಹಾಗೂ ಗುಬ್ಬಚ್ಚಿಗಳನ್ನು ಓಡಿಸುತ್ತಿದ್ದರು. ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ವನಮಹೋತ್ಸವಕ್ಕೆ ಹೋದಾಗ ಇಂತಹ ಗೂಡುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಡುತಿದ್ದರು. ಆದರೆ, ಪರಿಸರ ನಾಶದ ಪರಿಣಾಮವಾಗಿ ಗೀಜಗ ಹಕ್ಕಿಗಳು ಹಾಗೂ ಗುಬ್ಬಚ್ಚಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಕಾಳುಭಕ್ಷಕ ಪಕ್ಷಿ ಎಂದು ಕರೆಯಲಾಗುವ ಗೀಜಗ ಹಕ್ಕಿಯು, ಸಣ್ಣ ಸಣ್ಣ ಕೀಟಗಳನ್ನು ಸಹ ತಿನ್ನುತ್ತದೆ.
ಗೂಡು ಕಟ್ಟುವ ಕೌಶಲಕ್ಕೆ ಸಾಟಿ ಇಲ್ಲ: ಗೂಡು ಕಟ್ಟುವ ಪಕ್ಷಿಗಳಲ್ಲಿ ಗೀಜಗ ಹಕ್ಕಿಗಳನ್ನು ಮೀರಿಸಿದವರಿಲ್ಲ. ಪ್ಯಾಸರ್ ಡೊಮೆಸ್ಟಿಕಸ್ ಎಂದು ಕರೆಯಲಾಗುವ ಗೀಜಗ ಹಕ್ಕಿಗಳು ಪ್ಯಾಸಿರೆಡೆ ಕುಟುಂಬಕ್ಕೆ ಸೇರಿದ ಪಕ್ಷಿ ಎಂದು ಜೀವಶಾಸ್ತ್ರದಲ್ಲಿ ಗುರುತಿಸಲಾಗಿದೆ. ಒಣಗಿದ ಹುಲ್ಲು, ಕಡ್ಡಿ ಎಳೆದು ತಂದು ದಿನವಿಡಿ ಶ್ರಮವಹಿಸಿ ಗುಬ್ಬಚ್ಚಿಗಳು ಮನೆಯ ಆವರಣದಲ್ಲಿ, ಗಿಡಗಳಲ್ಲಿ ಹಾಗೂ ಬಾವಿಗಳ ಮೂಲೆಗಳಲ್ಲಿ ಗೂಡು ಕಟ್ಟುವ ಪರಿ ಸೋಜಿಗದ ಸಂಗತಿಯಾಗಿದೆ.
’ಗೀಜಗ ಹಕ್ಕಿಗಳು ಗೂಡು ಕಟ್ಟುವುದು ಸಂತಾನ ಸಂಭ್ರಮಕ್ಕೆ ಮತ್ತು ಬೆಚ್ಚಗಿನ ಅನುಭವಕ್ಕೆ. ಆದರೆ, ಮೊಬೈಲ್ ಟವರ್‌ಗಳ ತರಂಗಗಳಿಂದ ಗೀಜಗ ಹಕ್ಕಿಗಳ ಮೊಟ್ಟೆಗಳು ನಾಶವಾಗುತ್ತಿವೆ. ಗೀಜಗ ಹಕ್ಕಿಗಳ ಗೂಡು ಕಟ್ಟುವ ಸಂಭ್ರಮ, ಉತ್ತಮ ಮುಂಗಾರಿನ ಲಕ್ಷಣ‘ ಎಂದು ರೈತರು ಹೇಳುತ್ತಾರೆ.
ಚಿಕ್ಕಮಕ್ಕಳು ಮನೆಯಲ್ಲಿ ಅಳುತ್ತಿರುವಾಗ ಊಟ ಮಾಡದೇ ಇದ್ದಾಗ ಗುಬ್ಬಚ್ಚಿಗಳನ್ನು ತೋರಿಸಿ ಊಟ ಮಾಡಿಸುತ್ತಿದ್ದೆವು. ಆದರೆ ಈಚೆಗೆ ಗುಬ್ಬಚ್ಚಿಗಳೇ ಕಾಣುವುದಿಲ್ಲ
-ಲಕ್ಷ್ಮಿಬಾಯಿ ನಳಗಿರೆ ಹಿರಿಯ ನಾಗರಿಕರು
ಗೀಜಗ ಹಕ್ಕಿ ಹಾಗೂ ಗುಬ್ಬಚ್ಚಿ ಸಂತತಿ ರಕ್ಷಣೆಗೆ ಹೆಚ್ಚಾಗಿ ಆಹಾರ ಧಾನ್ಯ ಬೆಳೆಯುವುದರ ಜತೆಗೆ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಬೇಕು.
-ಭೀಮಾಶಂಕರ ಬಿರಾದಾರ ಪ್ರಾಧ್ಯಾಪರು ಸಾಹಿತಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.