ADVERTISEMENT

ರಾಜ್ಯದಲ್ಲಿರುವುದು ನಿರ್ಲಜ್ಜ ಸರ್ಕಾರ: ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ

ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 9:53 IST
Last Updated 16 ಸೆಪ್ಟೆಂಬರ್ 2022, 9:53 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಬೀದರ್‌: ‘ಶ್ರೀ ನಾರಾಯಣ ಗುರುಗಳಿಗೆ ಮುಖ್ಯಮಂತ್ರಿ ಅವಮಾನ ಮಾಡಿದ್ದಾರೆ. ಹಿಂದುಳಿದ ಸಮುದಾಯಗಳನ್ನು ಹತ್ತಿಕ್ಕುತ್ತಿರುವ ಬಸವರಾಜ ಬೊಮ್ಮಾಯಿ ನಿರ್ಲಜ್ಜ ಮುಖ್ಯಮಂತ್ರಿ. ರಾಜ್ಯದಲ್ಲಿರುವುದು ನಿರ್ಲಜ್ಜ ಸರ್ಕಾರ’ ಎಂದು ಕಲಬುರಗಿಯ ಚಿತ್ತಾಪುರದ ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿದರು.

‘ಸೆ.10ರಂದು ನಡೆದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿಲ್ಲ. ವಿಧಾನಸಭೆಯ

ಬ್ಯಾಂಕ್ವೆಟ್ ಹಾಲ್‌ನಲ್ಲೂ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಲಿಲ್ಲ. ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಸಚಿವ ವಿ.ಸುನೀಲ್‌ಕುಮಾರ್‌ ತೇಪೆ ಹಚ್ಚಲು ಬೆಂಗಳೂರಲ್ಲಿ ಗುರುವಾರ ಕಾರ್ಯಕ್ರಮ ಆಯೋಜಿಸಿ ಕೆಲವರಿಗೆ ಮಾತ್ರ ಆಹ್ವಾನ ನೀಡಿ, ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ADVERTISEMENT

‘ದಿವಂಗತ ಪುನೀತ್‌ ರಾಜಕುಮಾರ ರಾಜ್ಯದ ಏಳು ಕೋಟಿ ಜನರಿಗೆ ಸೇರಿದ ವ್ಯಕ್ತಿ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಲು ಯತ್ನಿಸಿದ್ದಾರೆ. ಆರ್ಯ ಈಡಿಗ ಅಭಿವೃದ್ಧಿ ನಿಗಮದ ಬಗ್ಗೆ ಒಂದು ಮಾತೂ ಆಡಿಲ್ಲ. ಈಡಿಗ ಸಮುದಾಯದ ಏಳು ಶಾಸಕರು, ಒಬ್ಬರು ಸಚಿವರಿದ್ದರೂ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ. ಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಪಠ್ಯದಲ್ಲಿನ ನಾರಾಯಣ ಗುರುಗಳ ಚರಿತ್ರೆಯನ್ನು ತೆಗೆದು ಹಾಕಿದೆ. ಯು.ಟಿ. ಖಾದರ್‌ ಅವರು ನಾರಾಯಣ ಗುರುಗಳ ಪಠ್ಯ ಮುಂದುವರಿಸುವಂತೆ ಒತ್ತಾಯಿಸಿದರು. ಆದರೆ, ನಮ್ಮದೇ ಸಮುದಾಯದ ಶಾಸಕರು ಒಂದೂ ಮಾತನಾಡಿಲ್ಲ. ನಮ್ಮವರಿಂದಲೇ ಸಮಾಜಕ್ಕೆ ಅನ್ಯಾಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಮಂಗಳೂರಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದೆ. ಈಡಿಗ ಸಮುದಾಯದವರು ಎಚ್ಚರ ವಹಿಸಬೇಕು. ಪ್ರವೀಣ ನೆಟ್ಟಾರ ಈಡಿಗ ಸಮುದಾಯಕ್ಕೆ ಸೇರಿದವರು. ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಟ್ಟಿಲ್ಲ. ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೋ ಒಂದು ಚಿಕ್ಕ ಕೆಲಸ ಕೊಡಲಾಗಿದೆ. ಬೊಮ್ಮಾಯಿ ಅವಧಿ ಮುಗಿಯುತ್ತಿದ್ದಂತೆಯೇ ಅವರ ನೌಕರಿ ಹೋಗಲಿದೆ. ಆದ್ದರಿಂದ ಅವರಿಗೆ ಶಾಶ್ವತ ನೌಕರಿ ಕೊಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ 70 ಲಕ್ಷ ಈಡಿಗರು ಇದ್ದಾರೆ. ಸೇಂದಿ ಇಳಿಸಿ, ಮಾರಾಟ ಮಾಡುವುದೇ ಅವರ ಕುಲಕಸುಬು ಆಗಿದೆ. ರಾಜ್ಯ ಸರ್ಕಾರ ಅದನ್ನು ಮುಂದುವರಿಸಲು ಅವಕಾಶ ನೀಡಬೇಕು. ಸಂಕಷ್ಟದಲ್ಲಿರುವ ಈಡಿಗ ಸಮುದಾಯದ ಅಭಿವೃದ್ಧಿಗಾಗಿ ನಿಗಮ, ಮಂಡಳಿ ರಚಿಸಬೇಕು. ಅದಕ್ಕೆ ₹ 500 ಕೋಟಿ ಮೀಸಲಿಡಬೇಕು. ನಾರಾಯಣ ಗುರುಗಳ ಹೆಸರಲ್ಲಿ ಶಾಲೆ ಆರಂಭಿಸಿದರೆ ಸಾಲದು. ಈಡಿಗ ಸಮುದಾಯದ ಮಕ್ಕಳಿಗೆ ಅಲ್ಲಿ ಪ್ರವೇಶ ದೊರೆಯಬೇಕು’ ಎಂದು ಒತ್ತಾಯಿಸಿದರು.

‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರಿಡಬೇಕು. ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾದಲ್ಲಿ 12ನೇ ಶತಮಾನದ ಹೆಂಡದ ಮಾರಯ್ಯನವರ ಸ್ಮಾರಕ ಇದೆ. ಅದನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಸೇರಿಸಬೇಕು. ಸರ್ಕಾರದಿಂದ ಅವರ ಜಯಂತಿಯನ್ನೂ ಆಚರಿಸಬೇಕು’ ಎಂದು ಆಗ್ರಹಿಸಿದರು.

ಬೀದರ್‌ ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ್, ಪ್ರಧಾನ ಕಾರ್ಯದರ್ಶಿ ಸಂಗಯ್ಯ ಈಡಿಗಾರ, ಸುಭಾಷ ಚೌಧರಿ, ಶಿವಕುಮಾರ ತೆಲಂಗ ಇದ್ದರು.

* * *

ಬೀದರ್‌ ಜಿಲ್ಲಾಡಳಿತದಿಂದ ನಾರಾಯಣ ಗುರುಗಳಿಗೆ ಅವಮಾನ

ಬೀದರ್‌: ‘ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾರಾಯಣ ಗುರುಗಳ ಜಯಂತಿ ಆಚರಿಸಿದರೂ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಒಬ್ಬ ಹಿರಿಯ ಅಧಿಕಾರಿಯೂ ಪಾಲ್ಗೊಳ್ಳದೆ ಅವಮಾನ ಮಾಡಿದ್ದಾರೆ’ ಎಂದು ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರದ ಆದೇಶವಿದ್ದರೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಉದ್ದೇಶ ಪೂರ್ವಕ ಕರ್ತವ್ಯ ಲೋಪ ಎಸಗಿದ್ದಾರೆ. ಇಂಥವರಿಂದ ಹಿಂದುಳಿದವರ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ. ಸಮುದಾಯದ ಬಲ ನೋಡಿ ಮಹಾ ಪುರುಷರ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳ ಪ್ರವೃತ್ತಿ ಖಂಡನೀಯ’ ಎಂದು ಕಟುವಾಗಿ ಟೀಕಿಸಿದರು.

‘ಜಿಲ್ಲೆಯಲ್ಲಿ 60 ಸಾವಿರ ಈಡಿಗ ಸಮುದಾಯದವರು ಇದ್ದಾರೆ. ಸೆ.18ರಂದು ಬೀದರ್‌ನ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಟ್ಟು 4 ಸಾವಿರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ವೀಕ್ಷಣೆಗೆ ಅನುಕೂಲವಾಗುವಂತೆ ರಂಗ ಮಂದಿರದ ಆವರಣದಲ್ಲಿ ಪೆಂಡಾಲ್‌ ಹಾಕಿ ಪ್ಲಾಸ್ಮಾ ಟಿವಿ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪಶು ಸಂಗೋಪನಾ ಸಚಿವ ಪ್ರಭು ಚವಾಣ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ, ಇಂಧನ ಸಚಿವ ವಿ.ಸುನೀಲಕುಮಾರ, ಜಿಲ್ಲೆಯ ಶಾಸಕರು, ಈಡಿಗ ಸಮುದಾಯದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.