ADVERTISEMENT

ಒಳಮೀಸಲಾತಿ ಹೆಸರಲ್ಲಿ ಬಿಜೆಪಿ ಮೋಸದಾಟ: ಬಸವರಾಜ ಕೌತಾಳ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:20 IST
Last Updated 23 ಏಪ್ರಿಲ್ 2024, 14:20 IST
ಬಸವರಾಜ ಕೌತಾಳ
ಬಸವರಾಜ ಕೌತಾಳ   

ಬೀದರ್‌: ‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಒಳಮೀಸಲಾತಿ ಹೆಸರಲ್ಲಿ ದಲಿತರೊಂದಿಗೆ ಮೋಸದಾಟ ಆಡುತ್ತಿದೆ’ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಕೌತಾಳ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಬದ್ಧ ಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗ ಸಮುದಾಯ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ, ಬಿಜೆಪಿ ಸಂಸದರು ಒಂದು ದಿನವೂ ಸಂಸತ್ತಿನಲ್ಲಿ ಮೀಸಲಾತಿ ಬಗ್ಗೆ ಮಾತನಾಡಿಲ್ಲ. ನರೇಂದ್ರ ಮೋದಿಯವರು ಒಳಮೀಸಲಾತಿ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. ಆದರೆ,ತೆಲಂಗಾಣದ ಚುನಾವಣೆಯಲ್ಲಿ ಲಾಭ ಪಡೆಯಲು ವಿಶ್ವರೂಪಂ ಸಮಾವೇಶಕ್ಕೆ ಬಂದು ನಾಟಕ ಮಾಡಿದರೇ ಹೊರತು ಅಲ್ಲಿಯೂ ವರ್ಗಿಕರಣ ನಾನು ಮಾಡೇ ಮಾಡುತ್ತೇನೆ ಎಂದು ಒಮ್ಮೆಯೂ ಬಾಯಿ ಬಿಡಲಿಲ್ಲ. ಇಂತಹ ಪಕ್ಷವನ್ನು ಮಾದಿಗ, ಛಲವಾದಿ, ತ್ರಿಮಸ್ಥ ಸೇರಿದಂತೆ ಎಲ್ಲ ದಲಿತರು ತಿರಸ್ಕರಿಸಬೇಕೆಂದು ಮನವಿ ಮಾಡಿದರು.

2008ರಲ್ಲಿ ಯುಪಿಎ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಉಷಾ ಮೆಹ್ರಾ ಸಮಿತಿ ಮೀಸಲಾತಿ ವರ್ಗೀಕರಣಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯ ಎಂದು ವಾದಿಸಿ ಸಮಗ್ರವಾದ ರಾಷ್ಟ್ರಮಟ್ಟದ ವರದಿ ಸಲ್ಲಿಸಿತ್ತು. ಈ ಶಿಫಾರಸು ಇದ್ದರೂ ಮೋದಿ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಲಿಲ್ಲ. ಬದಲಿಗೆ ಇನ್ನೊಂದು ಸಮಿತಿ ರಚಿಸಿ ವಂಚಿತ ಸಮುದಾಯಗಳಿಗೆ ಮಾಡಿದ ಮೋಸವಲ್ಲದೆ ಮತ್ತೇನೂ ಇಲ್ಲ ಎಂದರು.

ADVERTISEMENT

ಈಗಿನ ಸಮಿತಿಯಲ್ಲಿ ಮೀಸಲಾತಿ ವರ್ಗೀಕರಣ ಕುರಿತು ಪ್ರಸ್ತಾಪ ಇಲ್ಲದಿರುವುದು ದಲಿತರೊಂದಿಗೆ ಆಡುತ್ತಿರುವ ಮೋಸದಾಟವಾಗಿದೆ. ಶೇ. 3ರಷ್ಟಿರುವ ಬ್ರಾಹ್ಮಣ, ಬನಿಯಾಗಳಿಗೆ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಇಡಬ್ಲ್ಯೂಎಸ್‌ ಹೆಸರಿನಲ್ಲಿ ಶೇ 10ರಷ್ಟು ಮೀಸಲಾತಿ ನೀಡಲಾಯಿತು. ಇದೆಲ್ಲ ಒಂದು ವಾರದಲ್ಲಿ ಬಿಜೆಪಿ ಮುಗಿಸಿತು. 30 ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದರೂ ನಮ್ಮ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಒಕ್ಕೂಟದ ಮುಖಂಡ ಚಂದ್ರಕಾಂತ ಹಿಪ್ಪಳಗಾಂವೆ ಮಾತನಾಡಿ, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ 10 ವರ್ಷಗಳ ಕಾಲ ಜನರು ನೋಡಿ ಬೇಸತ್ತಿದ್ದಾರೆ. ಅವರಿಂದ ಯಾವುದೇ ಹೇಳಿಕೊಳ್ಳುವಂಥ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈ ಸಲ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಈಶ್ವರ ಖಂಡ್ರೆಯವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮುಖಂಡರಾದ ಬಕ್ಕಪ್ಪ ದಂಡೀನ್, ಬಾಬುರಾವ ಕೌಠಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.