
ಶಾಸಕರಾದ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ನಡುವಿನ ಜಟಾಪಟಿ
ಬೀದರ್: ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸೋಮವಾರದಿಂದ (ಜ.5) ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ಹುಮನಾಬಾದ್ ಪಟ್ಟಣದಲ್ಲಿ ಭಾರತೀಯ ನಾಗರೀಕ ಸಂಹಿತೆ–2023ರ ಕಲಂ 163(1) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಆದೇಶ ಹೊರಡಿಸಿದ್ದಾರೆ.
ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಎಂ.ಎಲ್.ಸಿ. ಭೀಮರಾವ್ ಪಾಟೀಲ್ ಅವರು ಪರಸ್ಪರ ನಿಂದಿಸಿಕೊಂಡು, ಜಗಳವಾಡಿದ್ದಾರೆ. ಇಬ್ಬರು ಹುಮನಾಬಾದ್ ಮತಕ್ಷೇತ್ರದವರು. ಇಬ್ಬರು ಪಟ್ಟಣದಲ್ಲಿ ಮನೆ ಹೊಂದಿದ್ದಾರೆ. ವಿಷಯ ತಿಳಿದ ನಂತರ ಹುಮನಾಬಾದಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಹಶೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ಧಾರೆ. ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಐದಕ್ಕಿಂತ ಹೆಚ್ಚು ಜನ ಗುಂಪು ಗುಂಪಾಗಿ ತಿರುಗಾಡುವುದು, ಆಯುಧಗಳನ್ನು ಹಿಡಿದುಕೊಂಡು ಓಡಾಡುವುದು, ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ ಘೋಷಣೆ ಹಾಕುವುದು, ಪ್ರಚೋದನಕಾರಿ ಭಾಷಣ ಮಾಡುವುದು, ಗುಂಪುಗೂಡಿ ರಾಜಕೀಯ ವಿಚಾರಗಳನ್ನು ಚರ್ಚಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.