ADVERTISEMENT

ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲ್ಲುವ ಅಭ್ಯರ್ಥಿ ಕಣಕ್ಕೆ: ಕಟೀಲ್‌

ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:43 IST
Last Updated 20 ಅಕ್ಟೋಬರ್ 2020, 2:43 IST
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ವಿಧಾನಸಭಾ ಕ್ಷೇತ್ರ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ದೀಪ ಬೆಳಗಿಸಿದರು. ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ವಿಧಾನಸಭಾ ಕ್ಷೇತ್ರ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ದೀಪ ಬೆಳಗಿಸಿದರು. ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಶಾಸಕ ಬಿ.ನಾರಾಯಣ ರಾವ್ ಅವರ ನಿಧನದಿಂದ ತೆರವಾದ ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲ್ಲುವವರನ್ನು ಕಣಕ್ಕಿಳಿಸಲಾಗುವುದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅರ್ಹ ಅಭ್ಯರ್ಥಿಯ ಘೋಷಣೆ ಮಾಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಹೇಳಿದರು.

ಇಲ್ಲಿನ ಪೂಜಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಧಾನಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಅನೇಕ ಅಕಾಂಕ್ಷಿ ಗಳಿರುತ್ತಾರೆ. ಪಕ್ಷದ ಪದಾಧಿಕಾರಿಗಳು ಯಾರ ಪರವಾಗಿಯೂ ವಾದ ಮಾಡ ಬಾರದು. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವುದಕ್ಕೆ ಶ್ರಮಿಸಬೇಕು. ಈ ಕ್ಷೇತ್ರದ ಕಾರ್ಯಕರ್ತರು ವಿಧಾನ ಪರಿಷತ್, ವಿಧಾನಸಭೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಇಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹600 ಕೋಟಿ ಮಂಜೂರು ಮಾಡಿಸಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ’ ಎಂದು ಹೇಳಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಬೇಕು. ಮತದಾರರ ಮನೆ ಬಾಗಿಲಿಗೆ ಹೋಗಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾಧನೆ ತಿಳಿಸುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿ, `ರಾಜ್ಯದಲ್ಲಿ ಬಿಜೆಪಿ ಆಡಳಿತ ಪಕ್ಷದ ಸ್ಥಾನದಲ್ಲಿರುವ ಕಾರಣ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಈಶಾನ್ಯ ವಲಯ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ.ನಮೋಶಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಶಾಂತಕುಮಾರ ಹಿರೇನಾಗಾಂವ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.