ಬೀದರ್: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧ್ಯಕ್ಷ ಅಮರನಾಥ ಪಾಟೀಲ, ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ನಗರದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು, ತಹಶೀಲ್ದಾರ್ ಕಚೇರಿಗೆ ತೆರಳಿ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಧರ್ಮಸ್ಥಳದ ಪಾವಿತ್ರ್ಯಕ್ಕೆ ಕಳಂಕ ಹಚ್ಚಿ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಷಡ್ಯಂತ್ರ ರೂಪಿಸಲಾಗಿದೆ. ಸಮಾಜ ವಿರೋಧಿ, ದೇಶ ವಿರೋಧಿಗಳ ಜಾಲ ಪತ್ತೆಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ, ಹತ್ಯೆಗಳು ನಡೆದಿವೆ. ತುಷ್ಟೀಕರಣ ರಾಜಕೀಯದಿಂದ ಸಮಾಜಘಾತುಕ ಶಕ್ತಿಗಳ ಹೆಚ್ಚಾಗಿದೆ. ಸೌಹಾರ್ದ ನಾಡಿಗೆ ಕಪ್ಪು ಚುಕ್ಕೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಯಾರೋ ಅನಾಮಿಕ ನೀಡಿದ ದೂರು ಆಧರಿಸಿ, ತನಿಖೆ ಕೈಗೊಂಡು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಕೆಲಸ ಮಾಡಲಾಗಿದೆ. ಈ ತಪ್ಪಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಧರ್ಮಸ್ಥಳದ ನೆಲದಿಂದಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಬೀದರ್ ಗ್ರಾಮೀಣ ಮಂಡಲ ಬಿಜೆಪಿ ಅಧ್ಯಕ್ಷ ದೀಪಕ ಗಾದಗೆ, ಬೀದರ್ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಉಲ್ಲಾಸಿನಿ ಮುದಾಳೆ, ಸಂಗಮೇಶ ನಾಸಿಗಾರ, ಬಾಬುರಾವ್ ಬಿರಾದಾರ, ಸುಭಾಷ ಮಡಿವಾಳ, ವೀರೇಶ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಧರ್ಮಸ್ಥಳಕ್ಕೆ ಕಪ್ಪು ಮಸಿಯುವ ಬಳಿಯುವ ಹುನ್ನಾರ ವಿಫಲಗೊಂಡಿದೆ. ಷಡ್ಯಂತ್ರ ನಡೆಸಿದವರ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ನಡೆಸಲಿದೆ.ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಶಾಸಕ
ಧರ್ಮಸ್ಥಳದ ಘಟನೆಯ ತನಿಖೆಯಿಂದ ಏನೂ ಸಾಬೀತಾಗಿಲ್ಲ. ಇದೊಂದು ಪಿತೂರಿ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದರ ಹಿಂದಿನ ಶಕ್ತಿಗಳು ಯಾರೆಂಬುದು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು.ಭಗವಂತ ಖೂಬಾ, ಕೇಂದ್ರದ ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.