ADVERTISEMENT

ಬೀದರ್‌| ಕೈದಿಗಳಿಗೆ ರಾಜಾತಿಥ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:50 IST
Last Updated 12 ನವೆಂಬರ್ 2025, 5:50 IST
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೀದರ್‌ ಡಿವೈಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೀದರ್‌ ಡಿವೈಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಡಿವೈಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ನೈಟ್ ಕ್ಲಬ್, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‌ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳೆಲ್ಲರಿಗೂ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೈದಿಗಳಿಗೆ ಟಿ.ವಿ., ಮೊಬೈಲ್ ಫೋನ್, ಗುಂಡು ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿರುವುದು ದುರದೃಷ್ಟಿಕರ’ ಎಂದರು.

‘ರಾಜ್ಯ ಸರ್ಕಾರವು ಕಣ್ಮುಚ್ಚಿ ಕುಳಿತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸರ್ಕಾರದ ಕುಮ್ಮಕ್ಕಿನಿಂದಲೇ ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ ಮಾಡಲಾಗುತ್ತಿದೆ. ಪತ್ರಿಕೆಗಳಲ್ಲಿ ಮಾಹಿತಿ ಬಂದ ನಂತರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಿನ್ನೆ ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದೇ ರೀತಿ ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿ ಜೈಲಿನಲ್ಲಿ ವ್ಯವಸ್ಥೆ ಆಗಲು ಸಾಧ್ಯವಿಲ್ಲ’ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೇರ ಹೊಣೆಗಾರರು. ಸುಮ್ಮನೆ ನಾಟಕ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು. ಇಬ್ಬರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕಲ್ಲೂರ್, ಬೀದರ್‌ ದಕ್ಷಿಣ ಮಂಡಲದ ಅಧ್ಯಕ್ಷ ಶಿವು ಸುಲ್ತಾನಪೂರೆ, ಹುಮನಾಬಾದ್‌ ಮಂಡಲದ ಅಧ್ಯಕ್ಷ ಡಿ.ಎನ್. ಪತ್ರಿ, ಸತೀಶ ಶಟಗೊಂಡೆ, ಬಿಜೆಪಿ ಯುವ ಮೋರ್ಚಾ ಬೀದರ್‌ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ  ಪುಷ್ಪಕಕುಮಾರ ಜಾಧವ, ಬಸವರಾಜ ಬಂಬುಳಗೆ, ವೀರೇಂದ್ರ ಪಾಟೀಲ, ಬಾಲಾಜಿ ಪಾಟೀಲ ನಾವದಗೇರಿ, ಶ್ರೀ ಬಸವರಾಜ ಮೂಲಗೆ, ಬೀದರ್‌ ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ಗುರು ಪಾಂಪಡೆ  ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.