ADVERTISEMENT

ದೇಶಕ್ಕೆ ಬೆಂಕಿ ಹಚ್ಚುತ್ತಿರುವುದೇ ಬಿಜೆಪಿ ಸಾಧನೆ: ಈಶ್ವರ ಖಂಡ್ರೆ ಟೀಕೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 12:31 IST
Last Updated 4 ಜುಲೈ 2022, 12:31 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ಧರ್ಮದ ಅವಹೇಳನ ಮಾಡಿ ದೇಶಕ್ಕೆ ಬೆಂಕಿ ಹಚ್ಚುತ್ತಿರುವುದೇ ಬಿಜೆಪಿ ಸಾಧನೆ.ದೇಶದಲ್ಲಿ ನಾಗರಿಕ ಯುದ್ಧ ನಿರ್ಮಾಣದಂತಹ ವಾತಾವರಣ ಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

ಇಲ್ಲಿಯ ಝೀರಾ ಕನ್ವೆನ್ಷಲ್ ಹಾಲ್‍ನಲ್ಲಿ ಸೋಮವಾರ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ನವ ಸಂಕಲ್ಪ ಶಿಬಿರದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಧರ್ಮಕ್ಕೆ ಅವಹೇಳನ ಮಾಡಿ ರಾಷ್ಟ್ರಕ್ಕೆ ಬೆಂಕಿ ಹಚ್ಚುವ ಕೆಲಸ ಅಪಾಯಕಾರಿಯಾಗಿದೆ. ಯಾವುದೇ ವ್ಯಕ್ತಿ ಯಾವುದೇ ಧರ್ಮದ ಅವಹೇಳನ ಮಾಡಿದರೂ ಅಂಥವರಿಗೆ ಶಿಕ್ಷೆಯಾಗಬೇಕು. ದೇಶದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ದೇಶದಲ್ಲಿ ಇನ್ನೂ 40 ವರ್ಷ ಬಿಜೆಪಿ ಅಧಿಕಾರ ನಡೆಸಲಿದೆ ಎಂದು ಅಮಿತ್‌ ಷಾ ಅವರು ಹೈದರಾಬಾದ್‌ನಲ್ಲಿ ದುರಹಂಕಾರದ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಬಿಜೆಪಿ ಅವನತಿ ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು.

ಬಿಜೆಪಿಯದ್ದು ನಕಲಿ ರಾಷ್ಟ್ರಭಕ್ತಿ. ಇಷ್ಟು ದಿನ ತಮ್ಮ ಕಚೇರಿಯಲ್ಲಿ ಬೇರೊಂದು ಧ್ವಜ ಹಾರಿಸುತ್ತಿದ್ದವರು ಈಗ ರಾಷ್ಟ್ರಭಕ್ತಿಯ ಕುರಿತು ಮಾತನಾಡುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಏನೂ ಇಲ್ಲ. ದೇಶದಲ್ಲಿ 57 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವೇ ದೇಶವನ್ನು ಸದೃಢಗೊಳಿಸಿದೆ ಎಂದರು.

ಬಿಜೆಪಿ, ಕೆಲ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದರೆ, ಕೆಲ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ಕಾಂಗ್ರೆಸ್‌ ಕಟ್ಟುವ ಕೆಲಸ ಮಾಡಿದರೆ ಬಿಜೆಪಿ ಮಾರುವ ಕೆಲಸ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.