ADVERTISEMENT

ಅನುಭವ ಮಂಟಪದ ನೀಲನಕ್ಷೆ ಸಿದ್ಧ; ಬಸವರಾಜ ಪಾಟೀಲ ಸೇಡಂ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 4:29 IST
Last Updated 8 ನವೆಂಬರ್ 2021, 4:29 IST
ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯಿಂದ ಭಾನುವಾರ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿದರು. ಹುಲಸೂರ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ದರಾಮ ಶರಣರು, ಮಲ್ಲಿಕಾರ್ಜುನ ಖೂಬಾ ಇದ್ದರು
ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯಿಂದ ಭಾನುವಾರ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿದರು. ಹುಲಸೂರ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ದರಾಮ ಶರಣರು, ಮಲ್ಲಿಕಾರ್ಜುನ ಖೂಬಾ ಇದ್ದರು   

ಬಸವಕಲ್ಯಾಣ: `ನಿರ್ಮಾಣ ಆಗಲಿರುವ ಅನುಭವ ಮಂಟಪದ ಸುತ್ತಲಿನ ಪ್ರದೇಶದಲ್ಲಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಲಾಗುತ್ತದೆ. ಒಂದು ತಿಂಗಳಲ್ಲಿ ಈ ಪ್ರದೇಶವನ್ನು ಗ್ರೀನ್ ಬೆಲ್ಟ್ ಎಂದು ಘೋಷಿಸಿ ಈ ಬಗ್ಗೆ ಸೂಚನೆ ಹೊರಡಿಸಲಾಗುವುದು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದಲ್ಲಿ ಬಸವ ಮಹಾಮನೆ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದಶಿವಯೋಗ ಉದ್ದೇಶ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಹಿತಿ ಗೋ.ರು.ಚನ್ನಬಸಪ್ಪ ಅವರ ನೇತೃತ್ವದ 8 ಜನರ ಸಮಿತಿ ಸಲ್ಲಿಸಿದ ವರದಿ ಹಾಗೂ ನೀಲನಕ್ಷೆಯಂತೆ ನೂತನ ಅನುಭವ ಮಂಟಪ ನಿರ್ಮಿಸಲಾಗುತ್ತದೆ. ಇದಕ್ಕಾಗಿ 5 ವರ್ಷಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಫ್ರೆಬ್ರುವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ನೆರೆಯ ರಾಜ್ಯಗಳ ಲಕ್ಷಾಂತರ ಜನರ ಸಮ್ಮುಖದಲ್ಲಿ ಅನುಮೋದನೆ ಪಡೆಯಲಾಗುತ್ತದೆ. ಯುಗಾದಿಗೆ ನಿರ್ಮಾಣ ಕೆಲಸ ಆರಂಭಿಸಿ 2027ರಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಸಾವಿರ ವರ್ಷ ಬಾಳಿಕೆಯ ಕಟ್ಟಡ ಇದಾಗಲಿದೆ. ಜತೆಗೆ 5 ಸಾವಿರ ಪ್ರವಾಸಿಗರ ವಸತಿ ವ್ಯವಸ್ಥೆಯೂ ಇರಲಿದೆ. ಮಂಟಪದ ಪರಿಸರದಲ್ಲಿ 10 ಎಕರೆ ಜಮೀನು ಮೀಸಲಿಟ್ಟು, ಧರ್ಮಗುರುಗಳ ನಿವಾಸಕ್ಕಾಗಿ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತದೆ. ನಗರದಲ್ಲಿನ ಎಲ್ಲ ಶರಣರ ಗವಿಗಳಿಗೆ ಹೊಸ ರೂಪ ನೀಡಿ, ಅಲ್ಲಿ ಶಿವಾನುಭೂತಿ ದೊರಕುವಂತೆ ಮಾಡಲಾಗುತ್ತದೆ. ಭೌತಿಕ ವಿಕಾಸದ ಜತೆಗೆ ವೈಚಾರಿಕ ಹಾಗೂ ಆಧ್ಯಾತ್ಮಿಕವಾಗಿಯೂ ಈ ಸ್ಥಳ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆಯುವಂತೆ ರೂಪುರೇಷೆ ತಯಾರಿಸಲಾಗಿದೆ' ಎಂದು ವಿವರಿಸಿದರು.

‘ನಗರದ ಸರ್ವಾಂಗೀಣ ವಿಕಾಸಕ್ಕೆ ₹80 ಕೋಟಿ ವೆಚ್ಚದ ಯೋಜನೆ ತಯಾರಾಗಿದೆ. ಈ ಎಲ್ಲ ಕಾರ್ಯಗಳು ನೆರವೇರಿದರೆ ನಗರದಲ್ಲಿನ ವಾರ್ಷಿಕ ಆರ್ಥಿಕ ವ್ಯವಹಾರ ₹3 ಸಾವಿರ ಕೋಟಿಗೂ ಹೆಚ್ಚಾಗಲಿದೆ. 2 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ. ಈ ಎಲ್ಲ ಕಾರ್ಯ ಪೂರ್ಣಗೊಳ್ಳಲು 5 ವರ್ಷ ಆಗುತ್ತದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು' ಎಂದು ಅವರು ಕೋರಿದರು.

ಬೆಲ್ದಾಳ ಸಿದ್ದರಾಮ ಶರಣರು ಮಾತನಾಡಿ, ‘ಅನುಭವ ಮಂಟಪದ ನಿಗದಿತ ಅನುದಾನ ಹೆಚ್ಚಿಸಬೇಕು. ಶಿವಯೋಗಕ್ಕೆ ಶರಣ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವಿದೆ’ ಎಂದು ಅವರು ಹೇಳಿದರು.

ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹುಲಸೂರ ಶಿವಾನಂದ ಸ್ವಾಮೀಜಿ, ಶ್ರೀಕಾಂತ ಸ್ವಾಮಿ, ಕಲ್ಯಾಣ ಕರ್ನಾಟಕ ಜನಪರ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ರಮೇಶ ಡಾಕುಳಗಿ, ರಘುನಾಥ ಮಾತನಾಡಿದರು.

ಸಾಯಗಾಂವ ಶಿವಾನಂದ ದೇವರು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಶಾಮರಾವ ಪ್ಯಾಟಿ, ಮುಖಂಡ ಬಸವರಾಜ ಬುಳ್ಳಾ, ನಗರಸಭೆ ಸದಸ್ಯ ರವೀಂದ್ರ ಬೋರೋಳೆ, ದಿಗಂಬರ ಮಡಿವಾಳ, ಪಿಂಟು ಕಾಂಬಳೆ, ಲಿಂಗರಾಜ ಶಿರಗಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.