ADVERTISEMENT

ಕೋಟೆಯಲ್ಲಿ ಬೋಟಿಂಗ್ ಮಜಾ

ಜೆಟ್ ಸ್ಕಿಗೆ ₹ 400, ಬೋಟ್ ಸಂಚಾರಕ್ಕೆ ₹ 100

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 16:14 IST
Last Updated 7 ಜನವರಿ 2023, 16:14 IST
ಬೀದರ್ ಉತ್ಸವದ ಅಂಗವಾಗಿ ಕೋಟೆಯ ಬೋಮಗೊಂಡೇಶ್ವರ ಕೆರೆಯಲ್ಲಿ ವ್ಯವಸ್ಥೆ ಮಾಡಲಾದ ಬೋಟಿಂಗ್ ಉತ್ಸವದಲ್ಲಿ ಬೋಟ್‍ನಲ್ಲಿ ಕುಳಿತು ಸಂಭ್ರಮಿಸಿದ ಗಣ್ಯರು
ಬೀದರ್ ಉತ್ಸವದ ಅಂಗವಾಗಿ ಕೋಟೆಯ ಬೋಮಗೊಂಡೇಶ್ವರ ಕೆರೆಯಲ್ಲಿ ವ್ಯವಸ್ಥೆ ಮಾಡಲಾದ ಬೋಟಿಂಗ್ ಉತ್ಸವದಲ್ಲಿ ಬೋಟ್‍ನಲ್ಲಿ ಕುಳಿತು ಸಂಭ್ರಮಿಸಿದ ಗಣ್ಯರು   

ಬೀದರ್: ‘ ಬೀದರ್ ಉತ್ಸವಕ್ಕೆ ಬಂದಿದ್ದ ಜನ ಕೋಟೆ ಆವರಣದಲ್ಲಿ ಇರುವ ಬೋಮಗೊಂಡೇಶ್ವರ ಕೆರೆಯಲ್ಲಿ ಬೋಟಿಂಗ್ ಮಜಾ ಅನುಭವಿಸಿದರು.

ಮಕ್ಕಳು, ಯುವಕರು ಹಾಗೂ ಹಿರಿಯರು ಜೆಟ್ ಸ್ಕಿ ಹಾಗೂ ಬೋಟ್‍ನಲ್ಲಿ ಕುಳಿತು ಕೆರೆ ಅಂಗಳದಲ್ಲಿ ಸಂಚರಿಸಿ ಸಂಭ್ರಮಿಸಿದರು.
ಬೋಟಿಂಗ್‍ಗಾಗಿ ಜನ ಬೆಳಿಗ್ಗೆಯಿಂದಲೇ ಬೋಮಗೊಂಡೇಶ್ವರ ಕೆರೆಯತ್ತ ಹೆಜ್ಜೆ ಹಾಕಲು ಆರಂಭಿಸಿದರು. ಮಧ್ಯಾಹ್ನದ ವೇಳೆಗೆ ಜಲ ಕ್ರೀಡೆಗಾಗಿ ನೂರಾರು ಜನ ಕೆರೆ ಅಂಗಳದಲ್ಲಿ ಸೇರಿದರು. ನಿಗದಿತ ಶುಲ್ಕ ಪಾವತಿಸಿ ಯಂತ್ರಚಾಲಿತ ಜೆಟ್ ಸ್ಕಿ ಹಾಗೂ ಬೋಟ್‍ನಲ್ಲಿ ಸಂಚರಿಸಿದರು.

ಬೀದರ್ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಬೋಟಿಂಗ್ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಬಹಳಷ್ಟು ಜನ ಜೆಟ್ ಸ್ಕಿ ಹಾಗೂ ಬೋಟ್ ಸಂಚಾರದ ಆನಂದ ಅನುಭವಿಸಿದ್ದಾರೆ ಎಂದು ಬೋಟಿಂಗ್ ಉತ್ಸವದ ನೋಡಲ್ ಅಧಿಕಾರಿ ಮಲ್ಲೇಶ ಬಡಿಗೇರ ತಿಳಿಸಿದರು.

ADVERTISEMENT

ಬೋಟಿಂಗ್‍ಗಾಗಿ ಉಡುಪಿಯಿಂದ ಲಾರಿಯಲ್ಲಿ ಬೋಟ್ ಹಾಗೂ ಜೆಟ್ ಸ್ಕಿ ತರಲಾಗಿದೆ. ಏಳು ಜನ ಪರಿಣಿತರು ಜೆಟ್ ಸ್ಕಿ ಹಾಗೂ ಬೋಟ್ ಸಂಚಾರ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬೋಟಿಂಗ್‍ಗೆ ಜೀವ ರಕ್ಷಕ ಜಾಕೇಟ್ ಕಡ್ಡಾಯಗೊಳಿಸಲಾಗಿದೆ. ಯಂತ್ರಚಾಲಿತ ಬೋಟ್ ಅನ್ನು ನುರಿತ ಚಾಲಕ ಚಲಾಯಿಸುತ್ತಿದ್ದಾರೆ. ಜೆಟ್ ಸ್ಕಿ ಹಿಂದೆ ಒಬ್ಬರು ಚಾಲಕ ಇರಲಿದ್ದಾರೆ ಎಂದು ತಿಳಿಸಿದರು.

ಜೆಟ್ ಸ್ಕಿ ಸಂಚಾರ ದರ ₹ 400 ಹಾಗೂ ಬೋಟ್ ದರ ₹ 100 ಇದೆ. ಬೋಟಿಂಗ್ ವೇಳೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೋಟಿಂಗ್ ಉತ್ಸವ ಜ. 10 ರ ವರೆಗೆ ನಡೆಯಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.