ADVERTISEMENT

ಬೀದರ್‌| ಮೂರು ದಿನಗಳ ಪುಸ್ತಕ ಸಂತೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:30 IST
Last Updated 25 ಜನವರಿ 2026, 6:30 IST
ಬೀದರ್‌ನಲ್ಲಿ ಶನಿವಾರ ಆರಂಭಗೊಂಡ ವೀರಲೋಕ ಪುಸ್ತಕ ಸಂತೆಯಲ್ಲಿ ಜನ ಪುಸ್ತಕ ಖರೀದಿಸಿ ಕೊಂಡೊಯ್ದರು
ಬೀದರ್‌ನಲ್ಲಿ ಶನಿವಾರ ಆರಂಭಗೊಂಡ ವೀರಲೋಕ ಪುಸ್ತಕ ಸಂತೆಯಲ್ಲಿ ಜನ ಪುಸ್ತಕ ಖರೀದಿಸಿ ಕೊಂಡೊಯ್ದರು   

ಬೀದರ್‌: ವೀರಲೋಕ ಬುಕ್ಸ್‌, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಮೂರು ದಿನಗಳ ಪುಸ್ತಕ ಸಂತೆಗೆ ನಗರದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ರಾಜ್ಯದ ವಿವಿಧ ಭಾಗದ ಸಾಹಿತಿಗಳು, ಪ್ರಕಾಶಕರು, ಓದುಗರು ಸಾಕ್ಷಿಯಾದ ಕಾರ್ಯಕ್ರಮಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡಿದರು. ‘ಜನರಲ್ಲಿ ಪುಸ್ತಕ ಅಭಿರುಚಿ ಬೆಳೆಸಲು ಪುಸ್ತಕ ಸಂತೆ ಸಹಕಾರಿಯಾಗಲಿದೆ’ ಎಂದರು.

‘ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಗ್ರಂಥಾಲಯ ಇಲಾಖೆ ಮೂಲಕ ಸಗಟು ಪುಸ್ತಕಗಳನ್ನು ಖರೀದಿಸಿಲ್ಲ. ಇದು ಕಾಲಕಾಲಕ್ಕೆ ನಡೆಯುತ್ತಿರಬೇಕು. ಬಜೆಟ್‌ನಲ್ಲಿಯೇ ಇದಕ್ಕೆ ವಿಶೇಷ ಅನುದಾನ ಇರಿಸಬೇಕು. ರಾಜ್ಯದಲ್ಲಿ 6,804 ಗ್ರಂಥಾಲಯಗಳಿವೆ. ಆದರೆ, ಅವುಗಳಿಗೆ ಪುಸ್ತಕ ಪೂರೈಸುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಿಸಬೇಕಿದೆ’ ಎಂದು ಒತ್ತಿ ಹೇಳಿದರು.

ADVERTISEMENT

ವೀರಲೋಕ ಬುಕ್ಸ್‌ನ ವೀರಕಪುತ್ರ ಶ್ರೀನಿವಾಸ ಮಾತನಾಡಿ, ‘ಪುಸ್ತಕ ಖರೀದಿಸಿ, ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಗೆ ಮೊದಲ ಬಾರಿಗೆ ಪುಸ್ತಕ ಸಂತೆ ಆಯೋಜಿಸಲಾಗಿದೆ’ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಸಂತೆಯ ಆಯೋಜಕ ಗುರುನಾಥ ರಾಜಗೀರಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ನಟರಾದ ಪ್ರೇಮ್‌, ಸುಚೇಂದ್ರಪ್ರಸಾದ್‌, ಅಶ್ವತ್ಥ, ಸುಲಕ್ಷಾ ಕೈರಾ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್‌ ಹಾನಗಲ್‌, ಬಾಬುರಾವ್‌ ಮಲ್ಕಾಪುರೆ ಪಾಲ್ಗೊಂಡಿದ್ದರು.

ನಾವು ಯಾವುದೇ ಕಾರ್ಯಕ್ರಮಗಳಿಗೆ ಹೋದರೆ ಅಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ನನಗೆ ಪುಸ್ತಕಗಳ ಮಹತ್ವ ತಿಳಿದ ನಂತರ ಇದನ್ನೇ ಮಾಡುತ್ತಿರುವೆ
ಪ್ರೇಮ್‌ ನಟ
ಈ ರೀತಿಯ ಪುಸ್ತಕ ಸಂತೆಗಳ ಆಯೋಜನೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೆರವು ನೀಡಲಾಗುವುದು. ಜಿಲ್ಲೆಯ ಎಲ್ಲ ಶಾಲೆಗಳು ಗ್ರಾಮ ಪಂಚಾಯಿತಿಗಳಲ್ಲಿ ಪುಸ್ತಕ ಖರೀದಿಸಲು ಅಧಿಕಾರಿಗಳಿಗೆ ಸೂಚಿಸುವೆ.
ಈಶ್ವರ ಬಿ. ಖಂಡ್ರೆ ಪರಿಸರ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.