ADVERTISEMENT

ಬಸವಕಲ್ಯಾಣ: ಸಾಹಿತ್ಯಕ್ಕೆ ಹಾರಕೂಡಶ್ರೀ ಕೊಡುಗೆ ದೊಡ್ಡದು

ಗ್ರಂಥಗಳ ಬಿಡುಗಡೆಗೊಳಿಸಿದ ಡಾ.ಸಂಗಮೇಶ ಸವದತ್ತಿಮಠ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:32 IST
Last Updated 1 ಜನವರಿ 2022, 7:32 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಡಾ.ಸಂಗಮೇಶ ಸವದತ್ತಿಮಠ ಗ್ರಂಥ ಬಿಡುಗಡೆಗೊಳಿಸಿದರು. ಚನ್ನವೀರ ಶಿವಾಚಾರ್ಯರು, ಡಾ.ಚಿತ್ಕಳಾ ಮಠಪತಿ, ಶಿವರಾಜ ಶಾಸ್ತ್ರೀ ಪಾಲ್ಗೊಂಡಿದ್ದರು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಡಾ.ಸಂಗಮೇಶ ಸವದತ್ತಿಮಠ ಗ್ರಂಥ ಬಿಡುಗಡೆಗೊಳಿಸಿದರು. ಚನ್ನವೀರ ಶಿವಾಚಾರ್ಯರು, ಡಾ.ಚಿತ್ಕಳಾ ಮಠಪತಿ, ಶಿವರಾಜ ಶಾಸ್ತ್ರೀ ಪಾಲ್ಗೊಂಡಿದ್ದರು   

ಬಸವಕಲ್ಯಾಣ: `ಚನ್ನವೀರ ಶಿವಾಚಾರ್ಯರು ನಾಲ್ಕು ಮಹತ್ವದ ಗ್ರಂಥಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿಮಠ ಶ್ಲಾಘಿಸಿದ್ದಾರೆ.

ತಾಲ್ಲೂಕಿನ ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಬರೆದ `ಚೆನ್ನಕಾಂತ ವಿಚಾರ ಬಿಂದುಗಳು’ ಹಾಗೂ ಡಾ.ಚಿತ್ಕಳಾ ಮಠಪತಿ ರಚಿಸಿದ `ಘನಲಿಂಗದ ಬೆಳಗು’ ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ಹಡಪದ ಅಪ್ಪಣ್ಣನವರ ನೂರೊಂದು ವಚನಗಳು, ಚೆನ್ನಚಿಂತನ, ಚನ್ನ ಚಂದ್ರಹಾರ ಚನ್ನವೀರ ಶಿವಾಚಾರ್ಯರ ಇದುವರೆಗಿನ ಕೃತಿಗಳಾಗಿವೆ. ಚೆನ್ನಕಾಂತ ವಿಚಾರ ಬಿಂದುಗಳು ಗ್ರಂಥದಲ್ಲಿ ವೈಚಾರಿಕ ದೃಷ್ಟಿಕೋನ, ಸಾಮಾಜಿಕ ಆಗುಹೋಗುಗಳ ಸಮರ್ಥ ವಿಶ್ಲೇಷಣೆಯಿದೆ. ಸಾಮಾನ್ಯ ವಿಷಯಗಳನ್ನೂ ಉತ್ತಮ ರೀತಿಯಲ್ಲಿ ಸಮಾಜದ ಎದುರು ಪ್ರಸ್ತುತಪಡಿಸಿದ್ದಾರೆ. ಸಾಕಷ್ಟು ಒತ್ತಡದ ಮಧ್ಯೆಯೂ ಬರವಣಿಗೆ ಕೈಗೊಂಡು ಉತ್ತಮ ಸಾಹಿತಿ ಎನಿಸಿಕೊಂಡಿದ್ದಾರೆ’ ಎಂದರು.

ADVERTISEMENT

`ಶಿವಾಚಾರ್ಯರು ಸ್ವತಃ ಬರೆಯುವುದಷ್ಟೇ ಅಲ್ಲ; ಮಠದಿಂದ ಇದುವರೆಗೆ ನಾಡಿದ ಹಿರಿ-ಕಿರಿ ಸಾಹಿತಿಗಳ ನೂರಾರು ಗ್ರಂಥಗಳನ್ನು ಪ್ರಕಟಿಸಿ ಸಾಹಿತ್ಯ ಸೇವೆಗೈದಿದ್ದಾರೆ. ತತ್ವ ಪದಕಾರರು, ಕವಿ, ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ಜಾತಿ ಮತ ಎಣಿಸದೆ ಸಕಲರಿಗೂ ಅವಕಾಶ ನೀಡಿದ್ದಾರೆ. ಲಿಂ.ಚನ್ನಬಸವ ಶಿವಯೋಗಿಗಳ ದಾರಿಯಲ್ಲಿ ಸಾಗಿ ಮಠದ ಕೀರ್ತಿ ಎಲ್ಲೆಡೆ ಹರಡಿಸಿದ್ದಾರೆ’ ಎಂದರು.

ಕಲಬುರಗಿ ಶರಣಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವರಾಜಶಾಸ್ತ್ರೀ ಹೇರೂರ ಮಾತನಾಡಿ, `ಬಸವಾದಿ ಶರಣರು ವಚನ ಸಾಹಿತ್ಯ ರಚಿಸುವ ಮೂಲಕ ಜನಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ್ದಾರೆ. ಮೂಢನಂಬಿಕೆಗಳನ್ನು ವಿರೋಧಿಸಿದ್ದಾರೆ. ಅವರ ತತ್ವವನ್ನು ಚನ್ನವೀರ ಶಿವಾಚಾರ್ಯರು ಪಾಲಿಸಿಕೊಂಡು ಬರುತ್ತಿದ್ದಾರೆ. ಮಠವನ್ನು ಜ್ಞಾನ, ಅನ್ನ ದಾಸೋಹದ ಕೇಂದ್ರವನ್ನಾಗಿ ಮಾಡಿದ್ದಾರೆ’ಎಂದರು.

ಕಲಬುರಗಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಚಿತ್ಕಳಾ ಮಠಪತಿ ಮಾತನಾಡಿ, `ಸಾಹಿತ್ಯ ಮತ್ತು ಸಾಹಿತಿಗಳಿಗೆ ಶಿವಾಚಾರ್ಯರು ಪ್ರೋತ್ಸಾಹ ನೀಡಿದ್ದರಿಂದ ಅನೇಕರು ಬೆಳವಣಿಗೆ ಕಂಡಿದ್ದಾರೆ. ನನಗೂ ಸಹಕಾರ ನೀಡಿದ್ದರಿಂದ ಘನಲಿಂಗದ ಬೆಳಗು ಕೃತಿ ಪ್ರಕಟ ಆಗುತ್ತಿದೆ’ ಎಂದರು.

ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹಿರಿಯ ಮುಖಂಡ ಚಂದ್ರಕಾಂತ ಪಾಟೀಲ ಶಿರಗಾಪುರ, ನಿವೃತ್ತ ಮುಖ್ಯಶಿಕ್ಷಕ ಪಿ.ಕೆ.ಹಿರೇಮಠ, ಸುಭಾಷ ಮುರೂಢ ಬೆಳಮಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ವಿಜಯಕುಮಾರ ಸಂಗೋಳಗಿ, ಮಲ್ಲಿನಾಥ ಹಿರೇಮಠ, ಅಪ್ಪಣ್ಣ ಜನವಾಡಾ ಪಾಲ್ಗೊಂಡಿದ್ದರು. ರಾಜೇಶ್ರೀ ದಿಲೀಪಸ್ವಾಮಿ, ಶರಣಪ್ಪ ಜಮಾದಾರ ಸಂಗೀತ ಪ್ರಸ್ತುತಪಡಿಸಿದರು. ಅಂಬಾರಾಯ ಉಗಾಜಿನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.