ADVERTISEMENT

ಬೀದರ್ | ಬಾವಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 10:39 IST
Last Updated 20 ಏಪ್ರಿಲ್ 2025, 10:39 IST
   

ಬೀದರ್: ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಲಸೂರ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಮುಚಳಂಬ ಗ್ರಾಮದ ಅವಿನಾಶ್ ಶರಣಪ್ಪ ಮಚಕೂರೆ (16) ಹಾಗೂ ಭಾಲ್ಕಿ ತಾಲ್ಲೂಕಿನ ಕೋಟಗೇರಾ ಗ್ರಾಮದ ಭಾಗೇಶ ಕಮಲಾಕರ ಮಾನೆ (16) ಮೃತ ಬಾಲಕರು.

ಐದು ಜನ ಸ್ನೇಹಿತರು ಗ್ರಾಮ ಸಮೀಪದ ಬಾವಿಯೊಂದರಲ್ಲಿ ಈಜಲು ಹೋಗಿದ್ದರು. ಈಜಲು ಬಾರದ ಓರ್ವ ಬಾಲಕ ನೀರಿಗೆ ಇಳಿದಿದ್ದಾನೆ. ಈಜು ಬಾರದಕ್ಕೆ ಬಾಲಕ ಮುಳುಗುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ಇನ್ನೊಬ್ಬ ಬಾಲಕ ಬಾವಿಗೆ ಜಿಗಿದಿದ್ದಾನೆ. ಈ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವಿಷಯ ತಿಳಿದು ಬಸವಕಲ್ಯಾಣ ಗ್ರಾಮೀಣ ಠಾಣೆಯ ಪಿಎಸ್‌ಐ ನಾಗೇಂದ್ರ, ಮಂಠಾಳ ಸಿಪಿಐ ಕೃಷ್ಣಕುಮಾರ್‌ ಪಾಟೀಲ ನೇತ್ರತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ನೆರವಿನಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.