ADVERTISEMENT

ಪೇಶ್ವೆಗಳಿಂದ ‘ಮಹಾರ್ ರೆಜಿಮೆಂಟ್’ ಸ್ಥಗಿತ

ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ರಾಜರತ್ನ ಅಂಬೇಡ್ಕರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:37 IST
Last Updated 18 ಫೆಬ್ರುವರಿ 2021, 7:37 IST
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ಭಂತೆ ಸಂಘಾನಂದ ಭಾವಚಿತ್ರದ ಪೂಜೆ ನೆರವೇರಿಸಿದರು. ರಾಜರತ್ನ ಅಂಬೇಡ್ಕರ್ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ಭಂತೆ ಸಂಘಾನಂದ ಭಾವಚಿತ್ರದ ಪೂಜೆ ನೆರವೇರಿಸಿದರು. ರಾಜರತ್ನ ಅಂಬೇಡ್ಕರ್ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಭೀಮಾ ಕೋರೆಗಾಂವ ಯುದ್ಧದಲ್ಲಿ ಸೋತಿದ್ದ ಪೇಶ್ವೆಗಳು ಪಿತೂರಿ ನಡೆಸಿ ಬ್ರಿಟಿಷ್ ಸೈನ್ಯದಲ್ಲಿನ ಮಹಾರ್ ರೇಜಿಮೆಂಟ್ ಸ್ಥಗಿತಗೊಳಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ವಾತಂತ್ರ್ಯದ ನಂತರ ಸೈನ್ಯದಲ್ಲಿ ಈ ರೇಜಿಮೆಂಟ್ ಮತ್ತೆ ಆರಂಭವಾಗಲು ಕ್ರಮ ತೆಗೆದುಕೊಂಡರು’ ಎಂದು ಡಾ.ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

‘28,000 ರಷ್ಟಿದ್ದ ಪೇಶ್ವೆಗಳು ಕೇವಲ 500 ಮಹಾರ್ ಸೈನಿಕರಿಂದ ಸೋತು ಅವಮಾನ ಅನುಭವಿಸಿದ್ದರು. ಹೀಗಾಗಿ ಮಹಾರ್‌ರಿಗೆ ತರತರದ ಕಾಟ ಕೊಟ್ಟರು. ಪೇಶ್ವೆಗಳು ಬ್ರಾಹ್ಮಣರಾಗಿದ್ದರಿಂದ ಇವರ ರಾಜ್ಯದಲ್ಲಿ ಅಸ್ಪೃಶ್ಯತೆ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ಇದರಿಂದಾಗಿ ತೀವ್ರ ಸಂಕಟ ಅನುಭವಿಸಿದ್ದ ದಲಿತರು ಅವರ ವಿರುದ್ಧ ನಿಂತರು. ಈ ಯುದ್ಧ ಪೇಶ್ವೆಶಾಹಿ ಅಂತ್ಯಕ್ಕೂ ಕಾರಣವಾಯಿತು. ಯುದ್ಧ ಸ್ಥಳವಾದ ಪುಣೆ ಹತ್ತಿರದ ವಿಜಯಸ್ತಂಭಕ್ಕೆ ಪ್ರತಿವರ್ಷ ಜನವರಿ 1ಕ್ಕೆ ದೇಶದೆಲ್ಲೆಡೆಯ ಸಾವಿರಾರು ಜನರು ಭೇಟಿ ನೀಡಿ ನಮಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಇಂದು ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆದಿದೆ. ಆದರೂ, ಭೀಮಾ ಕೋರೆಗಾಂವ ಯುದ್ಧದಲ್ಲಿ ಶೂರತನ ಮೆರೆದವರು ಮೌನವಾಗಿದ್ದೇವೆ. ಕೃಷಿ ಕಾನೂನುಗಳ ವಿರುದ್ಧ ರೈತರು, ಸಿಎಎ ವಿರುದ್ಧ ಮುಸ್ಲಿಮರು ರಸ್ತೆಗೆ ಇಳಿದಂತೆ ನಮಗೂ ಬೀದಿಗಿಳಿಯುವ ಸಮಯ ಬರುವುದು ನಿಶ್ಚಿತವಾದ್ದರಿಂದ ಒಗ್ಗಟ್ಟಾಗಿರಬೇಕು’ ಎಂದು ಕೇಳಿಕೊಂಡರು.

‘ಶಿಕ್ಷಣ ಸಂಸ್ಥೆ, ಕಾರ್ಖಾನೆಗಳನ್ನು ಸ್ಥಾಪಿಸಿ ದಲಿತರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕು. ವಿಶ್ವವಿದ್ಯಾಲಯ, ಬ್ಯಾಂಕ್ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ನಾನು ಪ್ರಯತ್ನಿಸುತ್ತಿದ್ದು, ಎಲ್ಲರ ಸಹಕಾರದ ಅಗತ್ಯವಿದೆ’ ಎಂದರು.

ವಿಜಯೋತ್ಸವ ಸಮಿತಿ ಅಧ್ಯಕ್ಷ ಮನೋಹರ ಮೈಸೆ, ಗೌರವ ಅಧ್ಯಕ್ಷ ದಿಲೀಪ ಭೋಸ್ಲೆ, ಅಂಬಾದಾಸ ಗಾಯಕವಾಡ ಮಾತನಾಡಿದರು.

ಭಂತೆ ಧಮ್ಮನಾಗ, ಭಂತೆ ಸಂಘಾನಂದ, ಭಂತೆ ನೌಪಾಲ್, ಮಿಲಿಂದ್ ಗುರೂಜಿ, ರವಿಂದ್ರ ಪ್ರತಾಪುರ, ಜಿಯಾಪಾಶಾ ಜಾಗೀರದಾರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಪ್ರಮುಖರಾದ ರಾಜೀವ ಕಡ್ಯಾಳ, ಪಂಡಿತ್ ಚಿದ್ರಿ, ಪೌರಾಯುಕ್ತ ಗೌತಮಬುದ್ಧ ಕಾಂಬಳೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ಸಂಜೀವ ವಾಡೇಕರ್, ಆನಂದ ದೇವಪ್ಪ, ಗೌತಮ ನಾರಾಯಣರಾವ್, ಸುರೇಶ ಮೋರೆ, ಮನೋಹರ ಮೋರೆ, ವಾಮನ ಮೈಸಲಗೆ, ಮೀನಾ ಗೋಡಬೋಲೆ, ಮನೋಜ ದಾದೆ, ಯುವರಾಜ ಭೆಂಡೆ, ಮುಜಾಹಿದ ಪಾಶಾ ಕುರೇಶಿ, ಭಾಸ್ಕರ ಕಾಂಬಳೆ, ಶಂಕರ ದಾಂಡಗೆ, ಭಾಗ್ಯವಂತ ದಾದೆ, ರವೀಂದ್ರ ಸಿಂಗಾರೆ ಪಾಲ್ಗೊಂಡಿದ್ದರು.

ಪ್ರಫುಲ್ ಗಾಯಕವಾಡ, ರಾಜೇಶ್ವರಿ, ದೇವೇಂದ್ರ ಮಂಠಾಳಕರ್ ಭೀಮಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.