ADVERTISEMENT

ಸಚಿವರ ನಿಷ್ಕ್ರಿಯತೆಗೆ ಬ್ರಿಮ್ಸ್ ಹಾಳು:ಉಸ್ತುವಾರಿ ಸಚಿವರ ರಾಜೀನಾಮೆಗೆ BJP ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:46 IST
Last Updated 5 ನವೆಂಬರ್ 2025, 5:46 IST
<div class="paragraphs"><p>ಬೀದರ್‌ನ ಬ್ರಿಮ್ಸ್</p></div>

ಬೀದರ್‌ನ ಬ್ರಿಮ್ಸ್

   

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ನಿಷ್ಕ್ರಿಯತೆಯಿಂದ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್‌) ಸಂಪೂರ್ಣ ಹಾಳಾಗಿದ್ದು, ನೈತಿಕ ಹೊಣೆ ಹೊತ್ತು ಖಂಡ್ರೆಯವರು ರಾಜೀನಾಮೆ ಕೊಡಬೇಕು’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಪ್ರಭು ಚವಾಣ್‌, ಶರಣು ಸಲಗರ್, ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ್ ಆಗ್ರಹಿಸಿದ್ದಾರೆ.

ಬ್ರಿಮ್ಸ್ ಆಸ್ಪತ್ರೆ ಇದೀಗ ಅಕ್ರಮ, ಭ್ರಷ್ಟಾಚಾರ, ಅವ್ಯವಸ್ಥೆಯ ಗೂಡಾಗಿದೆ. ಮೊದಲ ಬಾರಿಗೆ ಬ್ರಿಮ್ಸ್ ಈ ಪರಿಯಾಗಿ ಹಳಿ ತಪ್ಪಿ ಹಾಳಾಗಲು ಖಂಡ್ರೆಯವರ ಅಸಡ್ಡೆ, ನಿರ್ಲಕ್ಷ್ಯವೇ ಕಾರಣ. ಭ್ರಷ್ಟಾಚಾರ ಹೆಚ್ಚಾಗಿದೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೂರು ದಿನಗಳ ಹಿಂದೆ ಜಿಲ್ಲಾ ಖಂಡ್ರೆ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಮಾಧ್ಯಮಗಳಲ್ಲೂ ಸಹ ಈ ಕುರಿತು ವರದಿಗಳು ಬಂದಿವೆ. ವೈದ್ಯಕೀಯ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರ, ಅದರಲ್ಲಿನ ಅಂಶಗಳನ್ನು ನೋಡಿದರೆ ಖಂಡ್ರೆ ಅವರು ಬ್ರಿಮ್ಸ್ ಆಸ್ಪತ್ರೆ ವಿಷಯದಲ್ಲಿ ಎಷ್ಟೊಂದು ಅಸಹಾಯಕರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಮಂಗಳವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದರೆ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸ ಮುಗಿಯುವುದಿಲ್ಲ. ಜಿಲ್ಲೆಗೆ ಉಸ್ತುವಾರಿ ಸಚಿವರು ಏಕೆ ಬೇಕು? ಆಸ್ಪತ್ರೆಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ಅದಕ್ಕೆ ಸರ್ಜರಿ ಮಾಡಿ ಜನಹಿತ, ರೋಗಿಗಳ ಹಿತ ಕಾಪಾಡುವುದು ನಿಮ್ಮ ಹೊಣೆ. ಎರಡೂವರೆ ವರ್ಷದಿಂದ ಈ ಕಡೆ ಇಣುಕಿ ನೋಡಿಲ್ಲ. ಇಲ್ಲಿ ಏನಾಗುತ್ತಿದೆ? ಏನು ಮಾಡಬೇಕಿದೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಸಂಬಂಧಿತ ಇಲಾಖೆ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಇಲ್ಲಿಗೆ ಕರೆಯಿಸಿ ಸಭೆ ನಡೆಸಿ ಅವ್ಯವಸ್ಥೆಗೆ ಚಾಟಿ ಬೀಸುವ ಕೆಲಸ ಮಾಡಿಲ್ಲ. ಇದರ ಪರಿಣಾಮ ಇಂದು ಬ್ರಿಮ್ಸ್ ಆಸ್ಪತ್ರೆ ಸುಧಾರಣೆಯಾಗದ ರೀತಿಯಲ್ಲಿ ಅವ್ಯವಸ್ಥೆ ಗೂಡಾಗಿದೆ ಎಂದು ಆರೋಪಿಸಿದ್ದಾರೆ.

ಬ್ರಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಕ್ರಮ ನಡೆದಿದೆ ಎಂದು ಸಚಿವರೇ ಹೇಳಿದ್ದಾರೆ. ಹಾಗಾದರೆ ನೇಮಕಾತಿ ನಡೆಯುವ ಮುನ್ನ ಇತ್ತ ಗಮನಹರಿಸಿಲ್ಲವೇಕೆ? ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಜಿಲ್ಲೆಯ ಪ್ರತಿಯೊಂದು ಇಲಾಖೆ, ಸಂಸ್ಥೆ ಉಸ್ತುವಾರಿಯನ್ನು ನೋಡಬೇಕಾಗುತ್ತದೆ. ಸಚಿವರು ಇದರ ಬಗ್ಗೆ ಗಂಭೀರವಾಗಿಲ್ಲ. ಜಿಲ್ಲಾಡಳಿತವೂ ಕೇರ್ ಮಾಡಿಲ್ಲ. ನಿತ್ಯ ಇಲ್ಲಿ ದೂರು, ಆರೋಪಗಳು ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ.

ಈ ಭಾಗದ ಹೃದಯ ರೋಗಿಗಳಿಗೆ ವರದಾನ ಆಗಬೇಕಾದ ಕ್ಯಾಥ್ ಲ್ಯಾಬ್‌ ₹15 ಕೋಟಿ  ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. ಆದರೆ, ಈವರೆಗೆ ಇದು ಆರಂಭವಾಗಿಲ್ಲ. ಬಹುತೇಕ ಪೀಠೋಪಕರಣಗಳು ತುಕ್ಕು ಹಿಡಿಯುತ್ತಿವೆ. ಹೃದ್ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಹೈರಾಣಾಗುತ್ತಿದ್ದಾರೆ. ಬಡವರು ಹಣವಿಲ್ಲದೆ ಜೀವವೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಆದರೆ, ಇಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುತ್ತಿಲ್ಲ. ಇದೇ ರೀತಿ ಎಂಆರ್‌ಐ, ಸಿಟಿ ಸ್ಕ್ಯಾನ್‌ಗೂ ಸಮಸ್ಯೆಯಿದೆ. ವ್ಯವಸ್ಥೆ ಸಂಪೂರ್ಣ ಸುಧಾರಣೆಯಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಇಲ್ಲವಾದಲ್ಲಿ ಪಕ್ಷ ಜನಹಿತಕ್ಕಾಗಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.