ADVERTISEMENT

ಬಿಎಸ್ಎನ್‌ಎಲ್‌ ನೌಕರರ ಪ್ರತಿಭಟನೆ

ಸಿಬ್ಬಂದಿ ಪಿಂಚಣಿ ಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 14:00 IST
Last Updated 29 ಅಕ್ಟೋಬರ್ 2018, 14:00 IST
ಬೀದರ್‌ನ ಬಿಎಸ್ಎನ್‌ಎಲ್‌ ಕಚೇರಿ ಎದುರು ಸೋಮವಾರ ಬಿಎಸ್ಎನ್‌ಎಲ್ ಸಿಬ್ಬಂದಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು
ಬೀದರ್‌ನ ಬಿಎಸ್ಎನ್‌ಎಲ್‌ ಕಚೇರಿ ಎದುರು ಸೋಮವಾರ ಬಿಎಸ್ಎನ್‌ಎಲ್ ಸಿಬ್ಬಂದಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು   

ಬೀದರ್‌: ಪಿಂಚಣಿ ಹಾಗೂ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಸ್ಎನ್ಎಲ್ ಅಧಿಕಾರಿ ಮತ್ತು ಅಧಿಕಾರೇತರ ನೌಕರರ ಸಂಘಟನೆಗಳ ಒಕ್ಕೂಟ, ಆಲ್ ಯೂನಿಯನ್ಸ್ ಅಂಡ್‌ ಅಸೋಸಿಯೇಷನ್‌ ಆಫ್ ಬಿಎಸ್ಎನ್ಎಲ್ ನೇತೃತ್ವದಲ್ಲಿ ಇಲ್ಲಿನ ಬಿಎಸ್‌ಎನ್‌ಎಲ್‌ ಕಚೇರಿ ಎದುರು ನೌಕರರು ಹಾಗೂ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.

ಪಿಂಚಣಿ ಪರಿಷ್ಕರಣೆ ಮಾಡಬೇಕು. ನೇರ ನೇಮಕಾತಿಯಾದ ನೌಕರರಿಗೆ ಶೇ 30ರಷ್ಟು ನಿವೃತ್ತಿ ಸೌಲಭ್ಯಗಳನ್ನು ಕೊಡಬೇಕು ಹಾಗೂ 4ಜಿ ಸೇವೆ ಆರಂಭ ಮಾಡಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನವೆಂಬರ್ 14 ರಂದು ದೇಶದಾದ್ಯಂತ ರ‍್ಯಾಲಿ ನಡೆಸಲಾಗುವುದು. ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್ 30ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಸ್ಥೆಗೆ ಲಾಭ ಆಗದಿದ್ದರೆ ವೇತನ ಪರಿಷ್ಕರಣೆ ಆಗದು ಎಂದು ಹೇಳಲಾಗುತ್ತಿದೆ. ಮೂಲಸೌಕರ್ಯ ಒದಗಿಸದ ಕಾರಣ ಸಂಸ್ಥೆ ನಷ್ಟದಲ್ಲಿದೆ. ಇದಕ್ಕೆ ನೌಕರರನ್ನು ಹೊಣೆಗಾರರನ್ನಾಗಿ ಮಾಡಬಾರದು. 2005-2006 ರ ವರೆಗೆ ಸಂಸ್ಥೆ ಲಾಭದಲ್ಲಿ ನಡೆದಿದೆ ಎಂದು ಅಂದಿನ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದರು. ನಷ್ಟಕ್ಕೆ ಸಿಬ್ಬಂದಿ ಕಾರಣ ಅಲ್ಲ ಎಂದು ತಿಳಿಸಿದರು.

ಬೇರೆ ಖಾಸಗಿ ಕಂಪನಿಗಳಂತೆ ಬಿಎಸ್‌ಎನ್‌ಎಲ್ ಕೋಟ್ಯಂತರ ಸಾಲ ಪಡೆದು ಉದ್ಯಮ ನಡೆಸುತ್ತಿಲ್ಲ. ದೇಶದ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಲೆ ಸಮರದಲ್ಲಿ ತೊಡಗಿರುವ ರಿಲಯನ್ಸ್ ಜಿಯೊ ಕಂಪನಿಯಿಂದಾಗಿ ಬಿಎಸ್‌ಎನ್‌ಎಲ್‌ಗೆ ಆರ್ಥಿಕ ಹಿನ್ನಡೆಯಾಗಿದೆ. ಸಂಸ್ಥೆಯ ಪ್ರಗತಿಗೆ ಸರ್ಕಾರ ನೆರವಾಗಬೇಕು ಎಂದು ಮನವಿ ಮಾಡಿದರು.

ಬಿಎಸ್‌ಎನ್‌ಎನ್‌ 4ಜಿ ಸೇವೆಗಳ ವಿಸ್ತರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬಿಎಸ್‌ಎನ್‌ಎನ್‌ಗೆ ಅನುಮತಿ ಕೊಡುವಂತೆ ಹಿಂದೆಯೇ ಕೇಂದ್ರ ಸಚಿವರು ಸೂಚನೆ ನೀಡಿದ್ದರೂ ಅಧಿಕಾರಿಗಳು ಒಪ್ಪಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

2007ರಲ್ಲಿ ವೇತನ ಪರಿಷ್ಕರಣೆಯ ಸಮಯದಲ್ಲಿ ಪಿಂಚಣಿ ಪರಿಷ್ಕರಣೆ ಆಗಿತ್ತು. ಏಳನೇ ವೇತನ ಆಯೋಗವು ಬಿ.ಎಸ್.ಎನ್.ಎಲ್. ನೌಕರರಿಗೆ ತುಟ್ಟಿ ಭತ್ಯೆ ಸಿಗುವ ಕಾರಣದಿಂದಾಗಿ ಪಿಂಚಣಿಯನ್ನು ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ವೇತನ ಪರಿಷ್ಕರಣೆಯ ಆದೇಶದ ಸಮಯದಲ್ಲೇ ಪಿಂಚಣಿ ಪರಿಷ್ಕರಣೆಯ ಆದೇಶವನ್ನೂ ಸಹ ನೀಡಬೇಕು ಎಂದು ಒತ್ತಾಯಿಸಿದರು.

ಎರಡನೇ ವೇತನ ಆಯೋಗವು ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಶೇ 30ರಷ್ಟು ಮೂಲ ವೇತನ ಏರಿಕೆಯೊಂದಿಗೆ ನಿವೃತ್ತಿ ಸವಲತ್ತುಗಳನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ತಿಪ್ಪಣ್ಣ, ಎ.ಪಿ.ಸೇಂದ್ರೆ ಹಾಗೂ ಶಿವರಾಜ್ ಕಡ್ಡೆ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.