ADVERTISEMENT

ಬಜೆಟ್‌: ಭಾರಿ ನಿರೀಕ್ಷೆಯತ್ತ ಬಾಲ್ಕಿ ಜನ

ಸೇತುವೆಗಳ ಎತ್ತರ, ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಗುವುದೇ ಅನುದಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:21 IST
Last Updated 1 ಮಾರ್ಚ್ 2026, 6:21 IST
ಭಾಲ್ಕಿ ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆ
ಭಾಲ್ಕಿ ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆ   

ಭಾಲ್ಕಿ: ಮಳೆಗಾಲದಲ್ಲಿ ತಾಲ್ಲೂಕಿನ ಅನೇಕ ಸೇತುವೆಗಳು ಮುಳುಗಡೆಗೊಂಡು ರಸ್ತೆ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ. ಸುರಕ್ಷಿತ, ನಿರಂತರ, ಸುಗಮ ರಸ್ತೆ ಸಂಚಾರಕ್ಕೆ ಸೇತುವೆಗಳ ಎತ್ತರ ಹೆಚ್ಚಿಸಬೇಕು. ಸುರಕ್ಷತೆ ದೃಷ್ಟಿಯಿಂದ ಎತ್ತರದ ರಕ್ಷಣಾ ಗೋಡೆ ನಿರ್ಮಿಸಬೇಕು.

ಮಾಸಿಮಾಡ-ಗೋಧಿಹಿಪ್ಪರ್ಗಾ ಗ್ರಾಮದ ಸೇತುವೆ, ಲಖನಗಾಂವ, ಆನಂದವಾಡಿ ಗ್ರಾಮದ ಸೇತುವೆ, ಮಹಾರಾಷ್ಟ್ರದ ನೀಲಂಗಾ, ಬಸವಕಲ್ಯಾಣಕ್ಕೆ ಸಂಪರ್ಕ ಕಲ್ಪಿಸುವ ಇಂಚೂರ ಸೇತುವೆ, ಹುಮನಾಬಾದ್‌ಗೆ ಸಂಪರ್ಕ ಕಲ್ಪಿಸುವ ದಾಡಗಿ ಗ್ರಾಮದ ಸೇತುವೆಗಳು ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತವೆ.

ಕಳೆದ ಮಳೆಗಾಲದಲ್ಲಿ ಸುಮಾರು 5 ರಿಂದ7 ದಿನಗಳವರೆಗೆ ರಸ್ತೆ ಸಂಪರ್ಕ ಕಡಿತದಿಂದ ಜನರು ತೊಂದರೆ ಅನುಭವಿಸಿದ್ದಾರೆ. ಸೇತುವೆಗಳ ಎತ್ತರ ಹೆಚ್ಚಳಕ್ಕೆ ಬಜೆಟ್‌ನಲ್ಲಿ ಸೂಕ್ತ ಅನುದಾನ ದೊರೆಯಬೇಕು ಎನ್ನುತ್ತಾರೆ ಸ್ಥಳೀಯರು.

ADVERTISEMENT

ಮಳೆಗಾಲದಲ್ಲಿ ಕಾರಂಜಾ ಜಲಾಶಯದ ನೀರನ್ನು ನದಿಗೆ ಹರಿಸುವುದರಿಂದ ನದಿ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಅನ್ನದಾತರು ಬೆಳೆದ ಬೆಳೆಗಳು ಮಳೆಗೆ ಆಹುತಿಯಾಗಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಮಳೆ ನೀರು ನುಗ್ಗದಂತೆ ತಡೆಯಲು ಯೋಜನೆ ರೂಪಿಸಬೇಕಾಗಿದೆ.

ಪಟ್ಟಣದ ಬಸ್ ನಿಲ್ದಾಣ ಕಿರಿದಾಗಿದ್ದು, ಹೊಸ ಬಸ್ ನಿಲ್ದಾಣ ನಿರ್ಮಿಸಬೇಕು ಇಲ್ಲವೇ ಸದ್ಯ ಇರುವ ನಿಲ್ದಾಣವನ್ನು ವಿಸ್ತರಿಸಬೇಕು. ತರಕಾರಿ ಮಾರುಕಟ್ಟೆ ಸ್ಥಾಪಿಸಬೇಕು. ಖಟಕ ಚಿಂಚೋಳಿ, ಸಿದ್ದೇಶ್ವರ ಗ್ರಾಮದ ರೈತರಿಗೆ ಸೂಕ್ತ ರಸ್ತೆ  ವ್ಯವಸ್ಥೆ ಮಾಡಿಕೊಡಬೇಕಿದೆ.

ತಾಲ್ಲೂಕಿನಲ್ಲಿ ಸಣ್ಣ ಕೈಗಾರಿಕೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪಟ್ಟಣದಲ್ಲಿ ಮಕ್ಕಳ, ಸಾರ್ವಜನಿಕರ ವಿಹಾರಕ್ಕಾಗಿ ಉದ್ಯಾನವನ ನಿರ್ಮಾಣ ಅಗತ್ಯ. ರಾಜಕಾಲುವೆಯ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ವಾಯು ವಿಹಾರಿಗಳಿಗೆ ದುರ್ನಾತ ಸೂಸುತ್ತಿದೆ. ರಾಜಕಾಲುವೆಯ ನೀರು ಕೆರೆಗೆ ಸೇರದಂತೆ ಸೂಕ್ತ ಯೋಜನೆ ರೂಪಿಸಬೇಕಾಗಿದೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ನಮ್ಮ ತಾಲ್ಲೂಕು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ತುಂಬಾ ಪ್ರಗತಿ ಸಾಧಿಸಿದೆ. ಆದರೂ ಇನ್ನು ಸಾರ್ವಜನಿಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಬೇಕು ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ಭಾಲ್ಕಿ ಪಟ್ಟಣದಲ್ಲಿರುವ ಬಸ್ ನಿಲ್ದಾಣ

ಜನರ ಬೇಡಿಕೆಗಳೇನು? ಪಟ್ಟಣದ ಬಟಾಳ ಸಮೀಪ ನೂತನ ಸೇತುವೆ ನಿರ್ಮಿಸಬೇಕು. ಅಲ್ಲೇ ಇರುವ ರುದ್ರಭೂಮಿಗೆ ಮೂಲಸೌಕರ್ಯ ಕಲ್ಪಿಸಬೇಕು. ಭಾಲ್ಕಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವುದು. ಸಾರ್ವಜನಿಕ ಉದ್ಯಾನವನ ನಿರ್ಮಾಣ ಪಟ್ಟಣದ ಮಾಸುಮ್ ಪಾಶಾ ಕಾಲೊನಿಯಲ್ಲಿರುವ ಕೆರೆ ಅಭಿವೃದ್ಧಿಗೊಳಿಸುವುದು. ಸಂಚಾರ ಪೊಲೀಸ್ ಠಾಣೆ ಸ್ಥಾಪನೆ ನೂತನ ಬಸ್ ನಿಲ್ದಾಣ ನಿರ್ಮಾಣ ಕೃಷಿ ಮಾರುಕಟ್ಟೆಯಲ್ಲಿ ಶ್ರಮಿಕ ರೈತ ಭವನ ನಿರ್ಮಾಣ ಸಾರ್ವಜನಿಕ ಶೌಚಾಲಯ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೀಗೆ ಅನೇಕ ನಿರೀಕ್ಷೆ ಲೆಕ್ಕಾಚಾರಲ್ಲಿ ಕ್ಷೇತ್ರದ ಜನರು ಚಿತ್ತ ಹರಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಬೇಕಿದೆ ಉತ್ತೇಜನ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಐತಿಹಾಸಿಕ ಸ್ಥಳಗಳ ಮಹತ್ವ ಸಾರುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಭಾಲ್ಕಿ ಕೋಟೆ ಭಾತಂಬ್ರಾ ಕೋಟೆಯಲ್ಲಿ ಕೆಲವೆಡೆ ಶಿಥಿಲಗೊಂಡ ಗೋಡೆಗಳನ್ನು ಪುನರ್ ನಿರ್ಮಿಸಲಾಗಿದೆ. ಆದರೆ ಇನ್ನೂ ಪರಿಪೂರ್ಣವಾಗಿಲ್ಲ. ಕೋಟೆಯ ಒಳ ಆವರಣ ಸ್ವಚ್ಛಗೊಳಿಸಬೇಕು. ಕೋಟೆಗಳ ರಕ್ಷಣೆಯ ಜೊತೆಗೆ ಅವುಗಳ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮೂಲಸೌಕರ್ಯ ಕಲ್ಪಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ವಕೀಲ ಮಹೇಶ ರಾಚೋಟೆ ಪಂಢರಿ ಮೇತ್ರೆ.

- ಶಾಸಕರು ಏನಂತಾರೆ? ‘ಪಟ್ಟಣ ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿಗೆ ಭರಪೂರ ಅನುದಾನ ಒದಗಿಸುತ್ತಿದ್ದೇನೆ. ₹16 ಕೋಟಿ ಅನುದಾನದಲ್ಲಿ 150 ಹಾಸಿಗೆಗಳ ನೂತನ ಹೈಟೆಕ್ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ. ಇನ್ನೂ ಹೆಚ್ಚುವರಿಯಾಗಿ ₹16 ಕೋಟಿ ಅನುದಾನ ಒದಗಿಸಿದ್ದೇನೆ.

₹16 ಕೋಟಿ ಅನುದಾನದಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಈಶ್ವರ ಖಂಡ್ರೆ ‘ಪ್ರಜಾವಾಣಿ’ಗೆ ತಿಳಿಸಿದರು. ಕೆರೆ ಅಭಿವೃದ್ಧಿಗೆ ಮತ್ತೆ ₹15 ರೂಪಾಯಿ ಅನುದಾನ ಒದಗಿಸಲಾಗಿದೆ.

ಬೀದರ್‌ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ವಿಸ್ತೃತ ಯೋಜನಾ ವರದಿ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ತಾಲ್ಲೂಕಿನ ನಾಲ್ಕು ಬ್ರಿಜ್ ಕಂ ಬ್ಯಾರೇಜ್‌ಗಳಿಗೆ ಗೇಟ್ ಅಳವಡಿಸುವ ವ್ಯವಸ್ಥೆ ಮಾಡಿ ನೀರು ನಿಲ್ಲಿಸುವ ಯೋಜನೆ ಇದೆ. ಪ್ರಜಾಸೌಧ ಕಟ್ಟಡ ನಿರ್ಮಾಣ ರಿಂಗ್ ರೋಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಮೆಹಕರ್ ಏತ ನೀರಾವರಿ ಯೋಜನೆಗೆ ಮೊದಲ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸಿ ಮಂಜೂರಿ ಮಾಡಿಸಿದ್ದೇನೆ.

ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದ ಕಾಮಗಾರಿಗೆ ₹500 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಿಸಲು ಪ್ರಸ್ತಾವ ಸಲ್ಲಿಸಿದ್ದೇನೆ ಎಂದರು. ದಾಡಗಿ ಸೇತುವೆ ಎತ್ತರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರು ಮಾಡಿಸಲಾಗಿದೆ. ₹9 ಕೋಟಿ ಅನುದಾನದಲ್ಲಿ ವಿವಿಧ ಸಮುದಾಯ ಭವನ ನಿರ್ಮಾಣವಾಗುತ್ತಿವೆ. ₹1.20 ಕೋಟಿ ಅನುದಾನದಲ್ಲಿ ಮಹಾತ್ಮಗಾಂಧಿ ವೃತ್ತ ದಿಂದ ಅಂಬೇಡ್ಕರ್ ವೃತ್ತ ವರೆಗಿನ ರಸ್ತೆ ಡಾಂಬರೀಕರಣ ₹2 ಕೋಟಿ ಅನುದಾನದಲ್ಲಿ ವಿವೇಕಾನಂದ ವೃತ್ತ ಸಮೀಪದ ದಾದರ್ ನಿಂದ ಅಂಬೇಸಾಂಗವಿ ಕ್ರಾಸ್ ವರೆಗಿನ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.