ADVERTISEMENT

ಮೂಲ ಅನುಭವ ಮಂಟಪ ಸ್ಥಳದಲ್ಲೇ ಸ್ಮಾರಕಕ್ಕೆ ಆಗ್ರಹ

ಸಮಿತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ: ಮುಖ್ಯಮಂತ್ರಿಗೆ ಮನವಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 12:45 IST
Last Updated 9 ಡಿಸೆಂಬರ್ 2020, 12:45 IST
ಬಸವಕಲ್ಯಾಣದ ಮೂಲ ಅನುಭವ ಮಂಟಪ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಬೀದರ್‌ನಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ 12ನೇ ಶತಮಾನದ ಮೂಲ ಅನುಭವ ಮಂಟಪ ಸ್ಮಾರಕ ಹೋರಾಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಘೋಷಣೆ ಕೂಗಿದರು
ಬಸವಕಲ್ಯಾಣದ ಮೂಲ ಅನುಭವ ಮಂಟಪ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಬೀದರ್‌ನಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ 12ನೇ ಶತಮಾನದ ಮೂಲ ಅನುಭವ ಮಂಟಪ ಸ್ಮಾರಕ ಹೋರಾಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಘೋಷಣೆ ಕೂಗಿದರು   

ಬೀದರ್: ಬಸವಕಲ್ಯಾಣದ ಮೂಲ ಅನುಭವ ಮಂಟಪ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿ 12ನೇ ಶತಮಾನದ ಮೂಲ ಅನುಭವ ಮಂಟಪ ಸ್ಮಾರಕ ಹೋರಾಟ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಷಟ್‍ಸ್ಥಲ ಹಾಗೂ ರಾಷ್ಟ್ರ ಧ್ವಜ ಹಿಡಿದು ಘೋಷಣೆ ಕೂಗುತ್ತ ಹರಳಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರಿಗೆ ಸಲ್ಲಿಸಿದರು.

ಬಸವಕಲ್ಯಾಣದಲ್ಲಿ 900 ವರ್ಷಗಳ ಹಿಂದೆ ಸ್ಥಾಪಿಸಲಾದ ಅನುಭವ ಮಂಟಪ ವಿಶ್ವದ ಮೊಟ್ಟ ಮೊದಲ ಸಂಸತ್ತು ಆಗಿದೆ. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಜಾತಿ, ವರ್ಗ, ವರ್ಣ ರಹಿತ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು ಎಂದು ಹೇಳಿದರು.

ADVERTISEMENT

ಕಾಶ್ಮೀರದ ಭೂಪಾಲ ಮಹಾದೇವ, ಮೋಳಗಿಯ ಮಾರಯ್ಯ, ಅಪ್ಘಾನಿಸ್ಥಾನದ ಶಂಕರ ದೇವರು ಸೇರಿ ವಿಶ್ವದ ಮೂಲೆ ಮೂಲೆಗಳಿಂದ ಅನೇಕ ಶರಣರು ಅನುಭವ ಮಂಟಪಕ್ಕೆ ಬಂದಿದ್ದರು. ಶರಣರ ಕಾಯಕ ಸಿದ್ಧಾಂತವನ್ನು ಒಪ್ಪಿಕೊಂಡು, ಪಾಲಿಸಿ ಸುಖಕರ ಜೀವನ ನಡೆಸಿದ್ದರು ಎಂದು ಹೇಳಿದರು.

ಬಸವಕಲ್ಯಾಣದ ಮಧ್ಯ ಭಾಗದಲ್ಲಿ ಇರುವ ಅನುಭವ ಮಂಟಪ ಸ್ಥಳ ಸದ್ಯ ಖಾಸಗಿಯವರ ಒಡೆತನಕ್ಕೆ ಸೇರಿದೆ ಎಂದು ತಿಳಿಸಿದರು.

ಐದು ಸಾವಿರ ವರ್ಷಗಳ ಹಿಂದಿನ ಅಯೋಧ್ಯೆಯಲ್ಲಿನ ರಾಮಲೀಲಾದಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳುತ್ತಿರುವಾಗ, 900 ವರ್ಷಗಳ ಹಿಂದಿನ ಬಸವಾದಿ ಶರಣರು ಕಟ್ಟಿದ ಅನುಭವ ಮಂಟಪ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು ಎನ್ನುವುದು ಬಸವಾನುಯಾಯಿಗಳ ಬೇಡಿಕೆಯಾಗಿದೆ ಎಂದು ಹೇಳಿದರು.

ಸರ್ಕಾರ ಮೂಲ ಅನುಭವ ಮಂಟಪ ಸ್ಥಳ ಖರೀದಿಸಿ, ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆಗೆ ಹಸ್ತಾಂತರಿಸಿ, ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕು. ಈ ಮೂಲಕ ಯುವ ಪೀಳಿಗೆಗೆ ಅನುಭವ ಮಂಟಪದ ಇತಿಹಾಸ ಪರಿಚಯಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ಖಂಡ್ರೆ, ಸಂಚಾಲಕ ಓಂಪ್ರಕಾಶ ರೊಟ್ಟೆ, ತೃತೀಯ ಮೂಲ ಅನುಭವ ಮಂಟಪದ ಪೀಠಾಧಿಪತಿ ಶಿವಯೋಗಿ ಸಿದ್ಧರಾಮೇಶ್ವರ ನ್ಯಾಸ್‍ನ ಅಧ್ಯಕ್ಷ ನಾಗಪ್ಪ ಶಿಂಧೆ, ಕಾರ್ಯಾಧ್ಯಕ್ಷ ರವಿ ರಾಮಲು, ಪ್ರಧಾನ ಕಾರ್ಯದರ್ಶಿ ಪಾಪಯ್ಯ ಶಿಂದೆ, ದತ್ತು ಕರ್ಕಾಳೆ, ಮಲ್ಲಿಕಾರ್ಜುನ ಹಳ್ಳೆ, ನಾಗೇಶ ಬಿಡವೆ, ಭರತ ಖೇಡಕರ್, ಮಲ್ಲಿಕಾರ್ಜುನ, ಪ್ರಶಾಂತ ಬಿ. ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.