ADVERTISEMENT

ಬೀದರ್‌ | ಬಸ್‌ ನಿಲುಗಡೆಯು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಿರಲಿ: ಅಮೃತರಾವ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:29 IST
Last Updated 5 ಸೆಪ್ಟೆಂಬರ್ 2025, 6:29 IST
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ಅವರು ಬೀದರ್‌ನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರ ಸಮಸ್ಯೆ ಆಲಿಸಿದರು
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ಅವರು ಬೀದರ್‌ನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರ ಸಮಸ್ಯೆ ಆಲಿಸಿದರು    

ಬೀದರ್‌: ‘ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ ನಿಲುಗಡೆ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಆಗುತ್ತದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಜಿಲ್ಲಾ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸ್‌ ನಿಲುಗಡೆ ಮಾಡದಿದ್ದರೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ–ಕಾಲೇಜಿಗೆ ಹೋಗಲು ಆಗುವುದಿಲ್ಲ. ಅವರು ತರಗತಿಗಳಿಂದ ವಂಚಿತರಾಗಬಹುದು. ಎಲ್ಲೆಲ್ಲಿ ಸಮಸ್ಯೆ ಇದೆಯೋ ಪರಿಶೀಲಿಸಿ, ತಕ್ಷಣವೇ ಬಗೆಹರಿಸಬೇಕು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆ ವಹಿಸಬೇಕು. ಕೆಲವು ಹಳ್ಳಿ ಮತ್ತು ತಾಂಡಾಗಳಲ್ಲಿ ನ್ಯಾಯ ಬೆಲೆ ಅಂಗಡಿ ಇಲ್ಲ. ಅಲ್ಲಿನವರು ಬೇರೆ ಗ್ರಾಮಗಳಿಗೆ ಹೋಗಿ ತರಬೇಕಾದ ಪರಿಸ್ಥಿತಿ ಇದೆ. ಎಲ್ಲೆಲ್ಲಿ ಈ ಸಮಸ್ಯೆ ಇದೆಯೋ ಅಂತಹ ಕಡೆಗಳಲ್ಲಿ ಪಡಿತರ ಕೇಂದ್ರ ಸ್ಥಾಪಿಸಬೇಕು. ಥಂಬ್‌ ಪಡೆದ ಕೂಡಲೇ ರೇಷನ್‌ ವಿತರಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

ಐದು ಗ್ಯಾರಂಟಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಬೇಕು. ಜಿಲ್ಲೆಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿ ಒಟ್ಟು 3,81,970 ಪಡಿತರ ಚೀಟಿಗಳಿವೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಆಗಸ್ಟ್ ಅಂತ್ಯಕ್ಕೆ 3,55,246 ಫಲಾನುಭವಿಗಳು ನೋಂದಣಿ ಮಾಡಿಸಿದ್ದು, ಪ್ರತಿ ತಿಂಗಳಿಗೆ ₹2,000ದಂತೆ ಒಟ್ಟು ₹1,340.63 ಕೋಟಿ ಹಣ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಐಟಿ, ಜಿಎಎಸ್‌ಟಿ ಸಮಸ್ಯೆ ನಿವಾರಿಸಿಕೊಂಡವರು ಮತ್ತೆ ಅರ್ಜಿ ಸಲ್ಲಿಸಲು ತಿಳಿಸಬೇಕು ಎಂದರು.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 13,13,305 ಫಲಾನುಭವಿಗಳಿದ್ದು, ₹333.28 ಕೋಟಿ ಅನುದಾನ ಬಳಕೆಯಾಗಿದೆ. ಜುಲೈ 2023 ರಿಂದ ಜನವರಿ 2025 ರವರಿಗೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಯ ಮೊತ್ತವನ್ನು ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿತ್ತು. ಆದರೆ, ಫೆಬ್ರವರಿ 2025 ರಿಂದ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಜುಲೈನಿಂದ ಅಕ್ಕಿ ಜೊತೆಗೆ ಜೋಳ ಸೇರಿಸಿ ಒಟ್ಟು 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 11,825 ನೋಂದಣಿಯಾಗಿದ್ದು, ಇದರಲ್ಲಿ 7,853 ಪದವಿ, 172 ಡಿಪ್ಲೋಮಾ ಫಲಾನುಭವಿಗಳಿಗೆ ₹23.29 ಕೋಟಿ ಅನುದಾನ ಬಳಕೆಯಾಗಿದೆ. ಯುವನಿಧಿ ಯೋಜನೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮತ್ತು ತಾಲ್ಲೂಕು ಮಟ್ಟದಲ್ಲೂ ಕೂಡ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಒಟ್ಟು 3,68,667 ಫಲಾನುಭವಿಗಳಿದ್ದು ₹376.93 ಕೋಟಿ ಹಣ ಬಳಕೆಯಾಗಿದೆ. ಶಕ್ತಿ ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿ 2023ರ ಜೂನ್‌ 11ರಿಂದ ಈ ಸಾಲಿನ ಆಗಸ್ಟ್‌ 27ರ ವರೆಗೆ ಒಟ್ಟು 9.25 ಕೋಟಿ ಮಹಿಳಾ ಫಲಾನುಭವಿಗಳು ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಸಂಚರಿಸಿದ್ದಾರೆ. ವಿಭಾಗದ ವಾಹನದಲ್ಲಿ ಪ್ರತಿ ದಿನಕ್ಕೆ ಸರಾಸರಿ 1.14 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದಕ್ಕಾಗಿ ₹268.08 ಕೋಟಿ ಸಂದಾಯವಾಗಿದೆ. ಪ್ರತಿ ದಿನ ಪ್ರಯಾಣಿಕರಿಂದ ಸರಾಸರಿ ₹33.18 ಲಕ್ಷ ಸಾರಿಗೆಗೆ ಆದಾಯವಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಮ್.ಎಚ್, ಜೆಸ್ಕಾಂ ಕಾರ‍್ಯನಿರ್ವಾಹಕ ಎಂಜಿನಿಯರ್‌ ರಮೇಶ ಪಾಟೀಲ್, ಕೆಕೆಆರ್‌ಟಿಸಿ ಅಧಿಕಾರಿ ಆರ್.ಬಿ. ಜಾಧವ್‌, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ. ಪ್ರಭಾಕರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರು ಇದ್ದರು.

ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರ ಸಲ್ಲಿಸಬೇಕು. ಒಂದುವೇಳೆ ಅವರು ಸಮಸ್ಯೆಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಅಮೃತರಾವ್‌ ಚಿಮಕೋಡೆ ಅಧ್ಯಕ್ಷ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.