ಬೀದರ್: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಬೆಂಗಳೂರಿನಿಂದ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖಂಡರು, ಬೀದರ್ ತಾಲ್ಲೂಕಿನ ಪಾನ್ ಕಾಶೆಂಪುರ್ ಗ್ರಾಮಕ್ಕೆ ಭೇಟಿ ನೀಡಿದರು. ಇತ್ತೀಚೆಗೆ ಸಾಲದ ಹೊರೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಗಂಗಮ್ಮ ಮಚಕೂರೆ ಎಂಬುವರ ಮನೆಗೆ ತೆರಳಿ ವೈಯಕ್ತಿಕ ನೆರವು ನೀಡಿದರು.
ಆನಂತರ ಬೀದರ್ ತಾಲ್ಲೂಕಿನ ಬರೀದಾಬಾದ್, ಬುಧೇರಾ ಹಾಗೂ ಇಸ್ಲಾಂಪುರ ಗ್ರಾಮದಲ್ಲಿ ಭಾರಿ ಮಳೆಗೆ ಬೆಳೆ ಹಾನಿಯಾದ ರೈತರ ಜಮೀನುಗಳನ್ನು ವೀಕ್ಷಿಸಿ, ರೈತರಿಗೆ ಸಾಂತ್ವನ ಹೇಳಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ವಿಜಯೇಂದ್ರ, ಎನ್‌ಡಿಆರ್‌ಎಫ್ ಪರಿಹಾರ ಎಷ್ಟು ಬರಬೇಕೋ ಅಷ್ಟು ಬಂದೇ ಬರುತ್ತದೆ. ರಾಜ್ಯ ಸರ್ಕಾರ ಕೂಡ ಮುಂದೆ ಬಂದು ಪರಿಹಾರ ವಿತರಿಸಬೇಕು. ಅಧಿಕಾರಿಗಳನ್ನು ಬಂದು ಭೇಟಿ ಮಾಡಿ ಹೋಗುವುದರಲ್ಲಿ ಅರ್ಥವಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಸರ್ಕಾರ ಆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಯವರನ್ನು ನಾನು ಟೀಕಿಸಲ್ಲ. ಅವರಿಗೆ ವಿನಂತಿಪೂರ್ವಕವಾಗಿ ಆಗ್ರಹಿಸುತ್ತೇನೆ. ಬಿಜೆಪಿ ಸರ್ಕಾರವಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಎನ್‌ಡಿಆರ್‌ಆಫ್ ನಿಯಮಗಳಡಿ ಪರಿಹಾರ ನೀಡಲಾಗಿತ್ತು. ಅಷ್ಟೇ ಪರಿಹಾರ ರಾಜ್ಯ ಸರ್ಕಾರದಿಂದಲೂ ನೀಡಿದ್ದರು. ಮನೆ ಕಳೆದುಕೊಂಡವರು, ಬೆಳೆ ಹಾನಿಯಾದವರಿಗೆ ಪರಿಹಾರ ನೀಡಲಾಗಿತ್ತು. ಈಗಲೂ ರಾಜ್ಯ ಸರ್ಕಾರ ಅದೇ ರೀತಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಮಾಡಲು ನಾವಿಲ್ಲಿಗೆ ಬಂದಿಲ್ಲ. ಸಂಕಷ್ಟದಲ್ಲಿರುವ ರೈತರ ಜೊತೆ ಇರಬೇಕು. ಸಂಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯ ಸರ್ಕಾರವನ್ನು ಎಚ್ಚರಿಸಲು ಬಂದಿದ್ದೇವೆ. ಎರಡು ದಿನ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ರೈತರ ಸಂಕಷ್ಟ ಅರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಅತಿವೃಷ್ಟಿಯಿಂದ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿಸುತ್ತಿರುವ ಕಾರಣದಿಂದ ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಈಗಾಗಲೇ ಸಂಕಷ್ಟದಲ್ಲಿ ಇದ್ದರು. ಪ್ರವಾಹದಿಂದ ತೊಗರಿ, ಹೆಸರು ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಪ್ರವಾಹದಿಂದ ಹೆಚ್ಚಿನ ಸಂಕಷ್ಟವಾಗಿದೆ. ಬೆಳೆ ಜೊತೆಗೆ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಅತಿವೃಷ್ಟಿಯಾದಾಗ, ಮಹಾರಾಷ್ಟ್ರದ ಜಲಾಶಯದಿಂದ ನೀರು ಬಿಟ್ಟಾಗ ನದಿ ತೀರದ ರೈತರು, ಬಡವರಿಗೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಶಾಸಕರಾದ ಪ್ರಭುಚ ಚವಾಣ್, ಶರಣು ಸಲಗರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮುಖಂಡರಾದ ರಘುನಾಥರಾವ್ ಮಲ್ಕಾಪೂರೆ, ಬಾಬುವಾಲಿ, ಗುರುನಾಥ ಜ್ಯಾಂತಿಕರ್, ಸಂಜೀವಕುಮಾರ ಸಜ್ಜನ್, ಪೀರಪ್ಪ ಔರಾದೆ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಉಲ್ಲಾಸಿನಿ ಮುದಾಳೆ ಮತ್ತಿತರರು ಇದ್ದರು.
‘ಹಿಂದೂ ಸಮಾಜ ಯಾರು ಒಡೆಯಬಾರದು’
ಬೀದರ್: ‘ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿ ನಿಲ್ಲುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಮಾಜವನ್ನು ಒಡೆಯುವ ಕೆಲಸ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ಮಾಡಬಾರದು. ನಾನು ಅತಿವೃಷ್ಟಿ ವೀಕ್ಷಣೆಗೆ ಬಂದಿರುವೆ. ಜಾತಿವಾರು ಸಮೀಕ್ಷೆ ಬಗ್ಗೆ ಹೆಚ್ಚೇನೂ ಮಾತನಾಡಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎಂಬ ವಿಷಯದಲ್ಲಿ ಲಿಂಗಾಯತ ಸಮಾಜದ ಮುಖಂಡರು ನೀಡುತ್ತಿರುವ ಭಿನ್ನ ಹೇಳಿಕೆಗಳ ಬಗ್ಗೆ ನಿಮ್ಮ ನಿಲುವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.