ADVERTISEMENT

ಬೀದರ್‌: ಕಾರಂಜಾ ಹಿನ್ನೀರು ಪ್ರದೇಶದಲ್ಲಿ ಮತ್ತೆ ಕ್ಯಾಟ್‌ಫಿಶ್‌ ಪತ್ತೆ

ಆರು ವರ್ಷಗಳ ಹಿಂದೆ 60 ಸಾಕಾಣಿಕೆ ಹೊಂಡ ಧ್ವಂಸಗೊಳಿಸಿದ್ದ ಅಧಿಕಾರಿಗಳು

ಚಂದ್ರಕಾಂತ ಮಸಾನಿ
Published 20 ಜುಲೈ 2022, 19:30 IST
Last Updated 20 ಜುಲೈ 2022, 19:30 IST
ಬೀದರ್‌ ಜಿಲ್ಲೆಯ ಬೋತಗಿ ಗ್ರಾಮದ ಹೊರ ವಲಯದಲ್ಲಿ ಕೊಳಕು ನೀರಿನಲ್ಲಿ ಪತ್ತೆಯಾಗಿರುವ ಕ್ಯಾಟ್‌ಫಿಶ್‌ಗಳು
ಬೀದರ್‌ ಜಿಲ್ಲೆಯ ಬೋತಗಿ ಗ್ರಾಮದ ಹೊರ ವಲಯದಲ್ಲಿ ಕೊಳಕು ನೀರಿನಲ್ಲಿ ಪತ್ತೆಯಾಗಿರುವ ಕ್ಯಾಟ್‌ಫಿಶ್‌ಗಳು   

ಬೀದರ್‌: ಕಾರಂಜಾ ಹಿನ್ನೀರು ಪ್ರದೇಶದ ಹಾಗೂ ಹುಮನಾಬಾದ್‌ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮತ್ತೆ ಕ್ಯಾಟ್‌ಫಿಶ್‌ಗಳ ಮರಿಗಳು ಕಾಣಿಸಿಕೊಂಡಿವೆ. ಇವು ಹಳ್ಳಕೊಳ್ಳಗಳಲ್ಲಿನ ಮೀನುಗಳನ್ನು ತಿಂದು ಹಾಕುತ್ತಿವೆ. ಜಲಚರಗಳಿಗೆ ಹಾನಿ ಉಂಟು ಮಾಡುವ ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕ್ಯಾಟ್‌ಫಿಶ್‌ಗಳು ಮೀನುಗಾರರಲ್ಲಿ ಆತಂಕ ಸೃಷ್ಟಿಸಿವೆ.

ಆರು ವರ್ಷಗಳ ಹಿಂದೆ ಹಿರಿಯ ಅಧಿಕಾರಿ ಹರ್ಷ ಗುಪ್ತ ಕಟ್ಟುನಿಟ್ಟಿನ ಸೂಚನೆ ನೀಡಿದ ನಂತರ ಅಧಿಕಾರಿಗಳು ಎಲ್ಲ ಹೊಂಡಗಳನ್ನು ತೆರವುಗೊಳಿಸಿ ಕ್ಯಾಟ್‌ಫಿಶ್‌ ಉತ್ಪಾದನೆ ಅಕ್ರಮ ಜಾಲಕ್ಕೆ ಕಡಿವಾಣ ಹಾಕಿದ್ದರು. ಆದರೆ, ಈಗ ಕ್ಯಾಟ್‌ಫಿಶ್ ಸಾಕಾಣಿಕೆ ಹಾಗೂ ಮಾರಾಟಗಾರರ ಜಾಲ ಮತ್ತೆ ಸಕ್ರೀಯವಾಗುತ್ತಿದೆ.

ಹಿಂದೆ ತೆಲಂಗಾಣದ ಜಹೀರಾಬಾದ್ ಹಾಗೂ ನಾರಾಯಣಖೇಡ್‌ದಿಂದ ಕೆಲವರು ಕೋಳಿ ಹಾಗೂ ಜಾನುವಾರುಗಳ ಮಾಂಸದ ತ್ಯಾಜ್ಯವನ್ನು ಬೆಳಗಿನ ಜಾವ ತಂದು ಹೊಂಡದಲ್ಲಿ ಸುರಿದು ಕ್ಯಾಟ್‌ಫಿಶ್‌ ಬೆಳೆಸುತ್ತಿದ್ದರು. ಅಧಿಕಾರಿಗಳ ಬಿಗಿ ಕ್ರಮ ಹಾಗೂ ಕೋವಿಡ್‌ ಅವಧಿಯಲ್ಲಿ ಗಡಿಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿದ್ದ ಕಾರಣ ಇದಕ್ಕೆ ಕಡಿವಾಣ ಬಿದ್ದಿತ್ತು. ಈಗ ಮತ್ತೆ ಕ್ಯಾಟ್‌ಫಿಶ್‌ ಜಾಲ ಗರಿಬಿಚ್ಚಿಕೊಳ್ಳುತ್ತಿದೆ.

ADVERTISEMENT

2015ರ ಮೇನಲ್ಲಿ ಕಾರಂಜಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಲ್ಲಲ್ಲಿ ಹೊಂಡಗಳನ್ನು ತೋಡಿ ನಡೆಸಲಾಗುತ್ತಿದ್ದ ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಾಣಿಕೆ ತಾಣಗಳು ಪತ್ತೆಯಾದ ನಂತರ ಬೀದರ್ ತಹಶೀಲ್ದಾರ್‌ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಒಂದೇ ದಿನ ಜೆಸಿಬಿ ಮೂಲಕ 22 ಹೊಂಡಗಳನ್ನು ಧ್ವಂಸಗೊಳಿಸಿದ್ದರು.

ಅತಿವಾಳವಾಡಿ, ಡಾಕುಳಗಿ, ಮರಕಲ್, ರಂಜೋಳಖೇಣಿ ಗ್ರಾಮದ ಪರಿಸರದಲ್ಲಿಯೇ ಒಟ್ಟು 60 ಹೊಂಡಗಳನ್ನು ಪತ್ತೆ ಹಚ್ಚಿ ಅವುಗಳನ್ನೂ ಸಹ ಧ್ವಂಸಗೊಳಿಸಿದ್ದರು. ಹಿಂದೆ ಕ್ಯಾಟ್‌ಫಿಶ್‌ ಉತ್ಪಾದನೆಯಲ್ಲಿ ತೊಡಗಿರುವವರು ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದಾರೆ. ಕ್ಯಾಟ್‌ಫಿಶ್‌ಗಳನ್ನು ಹೈದರಾಬಾದ್‌ ಹಾಗೂ ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಕಾರಂಜಾ ಜಲಾಶಯದ ಹಿನ್ನೀರು ಪ್ರದೇಶ ನೀರಾವರಿ ನಿಗಮಕ್ಕೆ ಸೇರಿದ್ದು, ಅವರೇ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಹಿಂದೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದು ಅಂದಿನ ಪಶು ಸಂಗೋಪನಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ಕೊಟ್ಟು ಮುಂದೆ ನಿಂತು ಕ್ಯಾಟ್‌ಫಿಶ್‌ ಹೊಂಡಗಳನ್ನು ತೆರವುಗೊಳಿಸಿದ್ದರು.

ಬೆಚ್ಚಗಿನ ಪ್ರದೇಶ ಹಾಗೂ ಕೊಳಕು ನೀರಿನಲ್ಲಿ ಬಹುಬೇಗ ಬೆಳೆಯುವುದರಿಂದ ಕಾರಂಜಾ ಜಲಾಶಯದ ಹಿನ್ನೀರು ಪ್ರದೇಶವನ್ನೇ ಕ್ಯಾಟ್‌ಫಿಶ್‌ ಉತ್ಪಾದನಾ ಕೇಂದ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. 2018ರಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ವರ್ಗಾವಣೆಯಾದ ನಂತರ ತೆಲಂಗಾಣ ಮೂಲದವರು ಜಿಲ್ಲೆಯ ರಂಜೋಳಖೇಣಿ , ಅತಿವಾಳವಾಡಿ, ಡಾಕುಳಗಿ, ಅಮಿರಾಬಾದ್ ವಾಡಿ ಹೊರ ವಲಯದಲ್ಲಿ ಜೆಸಿಬಿಯಿಂದ ಪುನಃ ಹೊಂಡಗಳನ್ನು ನಿರ್ಮಾಣ ಮಾಡಿ ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್ ಸಾಕಾಣಿಕೆ ಆರಂಭಿಸಿದ್ದರು. ಕೋವಿಡ್‌ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಉತ್ಪಾದನೆ ಮತ್ತೆ ಜೀವ ಪಡೆದುಕೊಳ್ಳುತ್ತಿದೆ ಎಂದು ರೈತರು ಹೇಳುತ್ತಾರೆ.

ಮೀನುಗಾರಿಕೆ ಇಲಾಖೆ, ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಕ್ಯಾಟ್‌ಫಿಶ್‌ ಸಾಕಾಣಿಕೆಗೆ ಕಡಿವಾಣ ಹಾಕಬೇಕಾಗಿದೆ. ಕ್ಯಾಟ್‌ಫಿಶ್‌ಗಳ ಮರಿಗಳು ಈಚೆಗೆ ಸುರಿದ ಮಳೆಯಿಂದಾಗಿ ಹೊಂಡಗಳಿಂದ ಹೊರ ಬಂದಿವೆ. ಅವು ಜಲಾಶಯ ಸೇರಿದರೆ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಅತಿವಾಳವಾಡಿಯ ಮೀನುಗಾರರು ಆತಂಕ ವ್ಯಕ್ತಪಡಿಸುತ್ತಾರೆ.

ಮೀನುಗಾರರಿಂದ ದೂರು ಬಂದಿಲ್ಲ. ಆದರೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಲಾಗುವುದು. ಕ್ಯಾಟ್‌ಫಿಶ್‌ ಸಾಕಾಣಿಕೆ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲೇಶ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.