ADVERTISEMENT

ಗುಹಾ ದೇಗುಲ:ಮತ್ತೆ ಶುದ್ಧಗಾಳಿ ಪೂರೈಕೆ

ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಹಟ್ಟಿ ಗೋಲ್ಡ್‌ ಮೈನ್‌ ಕಂಪನಿ

ಚಂದ್ರಕಾಂತ ಮಸಾನಿ
Published 9 ಸೆಪ್ಟೆಂಬರ್ 2021, 4:14 IST
Last Updated 9 ಸೆಪ್ಟೆಂಬರ್ 2021, 4:14 IST
ಬೀದರ್‌ ಹೊರವಲಯದಲ್ಲಿರುವ ನರಸಿಂಹ ಝರಣಾ ಗುಹಾದೇಗುಲ
ಬೀದರ್‌ ಹೊರವಲಯದಲ್ಲಿರುವ ನರಸಿಂಹ ಝರಣಾ ಗುಹಾದೇಗುಲ   

ಬೀದರ್‌: ನಗರದ ಹೊರವಲಯದಲ್ಲಿರುವ ನರಸಿಂಹ ಝರಣಾ ಗುಹಾ ದೇಗುಲದಲ್ಲಿ 22 ವರ್ಷಗಳ ಹಿಂದೆ ಅಳವಡಿಸಿದ್ದ ಶುದ್ಧ ಗಾಳಿ ಪೂರೈಕೆ ಪೈಪ್‌ ದುರಸ್ತಿ ಕಾಮಗಾರಿ ಮುಕ್ತಾಯವಾಗಿದೆ. ಹಟ್ಟಿ ಗೋಲ್ಡ್‌ ಮೈನ್‌ ಕಂಪನಿಯ ಕಾರ್ಮಿಕರು ಸತತ 10 ದಿನ ಕಾರ್ಯನಿರ್ವಹಿಸಿ, ಕಾಮಗಾರಿ ಪೂರ್ಣಗೊಳಿಸಿದ್ದಾರೆ.

ಪುರಾತನ ಗುಹಾ ದೇವಾಲಯದಲ್ಲಿ ವಿಷ್ಣುವಿನ ಅವತಾರವಾದ ಉಗ್ರನರಸಿಂಹನ ಮೂರ್ತಿ ಇದೆ. ಗುಹೆಯಲ್ಲಿರುವ ಉದ್ಭವ ಮೂರ್ತಿಯ ದರ್ಶನ ಪಡೆಯಲು, ಎದೆ ಮಟ್ಟವಿರುವ ನೀರಿನಲ್ಲಿ 103 ಮೀಟರ್‌ ನಡೆಯಬೇಕು. ಹಬ್ಬ, ಹುಣ್ಣಿಮೆಯಲ್ಲಿ ಹೆಚ್ಚು ಭಕ್ತರು ಗುಹೆಯೊಳಗೆ ಹೋದಾಗ, ಶುದ್ಧ ಗಾಳಿ ಕೊರತೆಯಾಗಿ ಸಮಸ್ಯೆಯಾಗುತ್ತಿತ್ತು.

ಹಟ್ಟಿ ಗೋಲ್ಡ್‌ ಮೈನ್‌ ಕಂಪನಿ 1999ರ ಮೇ 11 ರಂದು ಗುಹೆಯಲ್ಲಿ ಪೈಪ್‌ ಅಳವಡಿಸಿ ಶುದ್ಧ ಗಾಳಿ ಪೂರೈಕೆಗೆ ವ್ಯವಸ್ಥೆ ಮಾಡಿತ್ತು. ಅದು ಕೆಟ್ಟ ಬಳಿಕ, 2009–2010ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಮುನಿಷ್ ಮೌದ್ಗಿಲ್‌ ದುರಸ್ತಿ ಮಾಡಿಸಿದ್ದರು. ಆದರೆ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ADVERTISEMENT

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಯಾವುದೇ ರೀತಿ ಧಕ್ಕೆಯಾಗದಂತೆ ಪೈ‍ಪ್‌ ಆಧಾರಕ್ಕೆ ಅಳವಡಿಸಿದ್ದ ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿದಿದ್ದವು. ಈಗಿನ ಜಿಲ್ಲಾಧಿಕಾರಿ ರಾಮಚಂದ್ರನ್‌ ಕೋರಿಕೆ ಮೇರೆಗೆ ಹಟ್ಟಿ ಗೋಲ್ಡ್‌ ಮೈನ್‌ ಕಂಪನಿ ಮತ್ತೆದುರಸ್ತಿ ಕಾರ್ಯ ಆರಂಭಿಸಿ ಸೆಪ್ಟೆಂಬರ್‌ 1ರಂದು ಪೂರ್ಣಗೊಳಿಸಿದೆ.

ಈಗ 100 ವರ್ಷ ಗಟ್ಟಿಯಾಗಿ ಉಳಿಯುವಂತಹ ರೈಲ್ವೆ ಹಳಿಯ ಕಬ್ಬಿಣದ ಕೊಳವೆಯನ್ನು ಗುಹೆಯೊಳಗೆ ಅಳವಡಿಸಿ, ಅದಕ್ಕೆ ಕಪ್ಪು ಬಣ್ಣ ಬಳಿದು ಸಿಮೆಂಟ್‌ನಿಂದ ಮುಚ್ಚಲಾಗಿದೆ. ಒಂದೂವರೆ ವರ್ಷದಿಂದ ಕೋವಿಡ್ ಕಾರಣ ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಈ ಸಮಯವನ್ನು ಜಿಲ್ಲಾಡಳಿತ ದುರಸ್ತಿ ಕಾರ್ಯಕ್ಕೆ ಬಳಸಿಕೊಂಡಿದೆ.

‘ಬಳಕೆಯಾಗದೆ ಉಳಿದಿದ್ದ ಕಬ್ಬಿಣದ ಹಳಿಗಳನ್ನು ಗುಹೆಯೊಳಗೆ ಬಳಸಲಾಗಿದೆ. ಗುಹೆಯೊಳಗಿನ ಶುದ್ಧ ಗಾಳಿ ಪೂರೈಕೆ ಪೈಪ್‌ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನೂ ಸರಿಪಡಿಸಲಾಗಿದೆ’ ಎಂದು ಹಟ್ಟಿ ಗೋಲ್ಡ್‌ ಮೈನ್‌ ಕಂಪನಿಯ ವ್ಯವಸ್ಥಾಪಕ ಮಂಜುನಾಥ ತಿಳಿಸಿದರು.

‘ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರುನರಸಿಂಹ ಝರಣಾ ದೇವಸ್ಥಾನಕ್ಕೆ ಹೆಚ್ಚು ಬರುತ್ತಾರೆ. ನಾಲ್ಕು ವರ್ಷಗಳ ಹಿಂದೆ ಬರ ಬಂದ ಕಾರಣ ಗುಹೆಯಲ್ಲಿನ ನೀರು ಒಣಗಿ ಹೋಗಿತ್ತು. ಅಂತರ್ಜಲವೂ ಬತ್ತಿ ಹೋಗಿತ್ತು. ಹೀಗಾಗಿ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಮಂದಿರ ಸಮೀಪ ಚಿಕ್ಕದಾದ ಚೆಕ್‌ಡ್ಯಾಮ್‌ ನಿರ್ಮಿಸಲಾಗಿದೆ’ ಎಂದು ನರಸಿಂಹ ಝರಣಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್‌ ಕುಲಕರ್ಣಿ ವಿವರಿಸಿದರು.

‘ಪ್ರಸ್ತುತ ಉತ್ತಮ ಮಳೆಯಾಗುತ್ತಿರುವ ಕಾರಣ ಗುಹೆಯೊಳಗೆ ಎದೆ ಮಟ್ಟದಲ್ಲಿ ನೀರು ಹರಿದು ಬರುತ್ತಿದೆ. ಮೂರು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಭಕ್ತರು ಗುಹಾದೇವಾಲಯಕ್ಕೆ ಹೋಗಿ ಬಂದ ಬಳಿಕ ಬಟ್ಟೆ ಬದಲಿಸಿಕೊಳ್ಳಲು ಕೊಠಡಿ, ಸ್ನಾನಗೃಹ ಮತ್ತು ಇನ್ನಷ್ಟು ಶೌಚಾಲಯಗಳ ಬ್ಲಾಕ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

‘ಮಂದಿರದ ಆವರಣದಲ್ಲಿ ಪುಷ್ಕರಣಿ ಇರುವ ಕಾರಣ ದೇಗುಲ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಸರ್ಕಾರ ಈಜುಕೊಳಗಳ ಪ್ರವೇಶಕ್ಕೆ ಅನುಮತಿ ನೀಡಿದ ನಂತರ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಪ್ರವೇಶ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.