ADVERTISEMENT

ಚಂದ್ರಕಲಾ ಹಾರಕೂಡೆ ಸಮ್ಮೇಳನಾಧ್ಯಕ್ಷೆ

24ಕ್ಕೆ ಹುಲಸೂರನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಮಾಣಿಕ ಆರ್ ಭುರೆ
Published 14 ಜನವರಿ 2021, 3:17 IST
Last Updated 14 ಜನವರಿ 2021, 3:17 IST
ಚಂದ್ರಕಲಾ ಹಾರಕೂಡೆ
ಚಂದ್ರಕಲಾ ಹಾರಕೂಡೆ   

ಬಸವಕಲ್ಯಾಣ: ಇಲ್ಲಿಗೆ ಸಮೀಪದ ನೂತನ ತಾಲ್ಲೂಕು ಕೇಂದ್ರ ಹುಲಸೂರನಲ್ಲಿ ಜನವರಿ 24 ರಂದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲ್ಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಸಾಹಿತಿ, ಜಾನಪದ ಕಲಾವಿದೆ ಚಂದ್ರಕಲಾ ಹಾರಕೂಡೆ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಪಟ್ಟಣದ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಂಗಳವಾರ ಪೂರ್ವಸಿದ್ಧತಾ ಸಭೆ ಆಯೋಜಿಸ ಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮಾತನಾಡಿ, `ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠವು ಬಸವತತ್ವ ಪ್ರಸಾರ ಹಾಗೂ ಕನ್ನಡದ ಸೇವೆಯ ಮಠವಾಗಿದೆ. ಮಠಾಧಿಪತಿ ಶಿವಾನಂದ ಸ್ವಾಮೀಜಿಯವರು ಬಸವತತ್ವದ ಪ್ರಚಾರಕ್ಕಾಗಿ ಎರಡು ಸಲ ಭಾರತಯಾತ್ರೆ ಕೈಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಸಾಹಿತ್ಯ ಸಮ್ಮೇಳನ, ಜಿಲ್ಲಾ ಮಟ್ಟದ ಸಮ್ಮೇಳನ ಹಮ್ಮಿಕೊಂಡಿದ್ದರು. ಇಲ್ಲಿ ಆಗಲೇ ಈ ಸಮ್ಮೇಳನ ನಡೆಯಬೇಕಾಗಿತ್ತು. ಆದರೆ ಸ್ವಾಮೀಜಿಯವರು ಭಾರತಯಾತ್ರೆ ಕೈಗೊಂಡಿದ್ದರಿಂದ ವಿಳಂಬವಾಗಿದೆ’ ಎಂದರು.

ಪರಿಷತ್ತಿನ ಗೌರವಾಧ್ಯಕ್ಷ ಮಲ್ಲಪ್ಪ ಧಬಾಲೆ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ನಿಡೋದೆ, ನಗರ ಘಟಕದ ಅಧ್ಯಕ್ಷ ಸಂಗಮೇಶ ಭೋಪಳೆ, ಆಕಾಶ ಖಂಡಾಳೆ, ಶಿವರಾಜ ಖಪಲೆ, ರಾಜಕುಮಾರ ತೊಂಡಾರೆ, ರೇಖಾ ಕಾಡಾದಿ, ಶಕುಂತಲಾ ಸ್ವಾಮಿ, ಪ್ರಕಾಶ ಮಂಗಾ, ಶ್ರೀಕಾಂತ ಕವಟೆ ಉಪಸ್ಥಿತರಿದ್ದರು.

ADVERTISEMENT

ವಿಶಿಷ್ಟ ಸಾಧನೆ: 63 ವರ್ಷ ವಯಸ್ಸಿನ ಚಂದ್ರಕಲಾ ಸಂಗಪ್ಪ ಹಾರಕೂಡೆ ಅವರು ಹುಲಸೂರ ಗ್ರಾಮದವರು. ವಿಶಿಷ್ಟ ಪ್ರತಿಭೆ ಹೊಂದಿದ್ದಾರೆ. ಕವಿತೆ, ಜಾನಪದ ಗೀತೆಗಳನ್ನು ಬರೆಯುವ ಜತೆಗೆ ಸುಶ್ರಾವ್ಯವಾಗಿ ಹಾಡುತ್ತಾರೆ. ಇವರು ‘ಚಂದ್ರಸಂಗ ಸಿರಿ’ `ಜಾನಪದ ಗೀತೆಗಳ ಸಂಗ್ರಹ’ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಾವೇ ಹಾಡಿದ ಹಾಡುಗಳ ‘ಚಂದ್ರಸಂಗ ಸಿರಿಗಾನ’ ಧ್ವನಿಸುರುಳಿ ಕೂಡ ಹೊರತಂದಿದ್ದಾರೆ.

ಬಾಲ್ಯದಿಂದಲೇ ಹಾಡುವುದರಲ್ಲಿ ಹಾಗೂ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಜಾನಪದ ಹಾಡುಗಳನ್ನು ತಾವೇ ಸ್ವತಃ ರಚಿಸಿ ನೂರಾರು ಪದ್ಯಗಳನ್ನು ಬಾಯಿಪಾಠವೇ ಹಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಇವರು ಹಾಡಿದ್ದಾರೆ. ಈ ಭಾಗದಲ್ಲಿ ಇವರನ್ನು ‘ಕಲ್ಯಾಣ ಕರ್ನಾಟಕದ ಕೋಗಿಲೆ’ ಎಂದೇ ಕರೆಯಲಾಗುತ್ತದೆ.

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹುಲಸೂರನಲ್ಲಿನ ಶರಣ ಸಂಸ್ಕೃತಿ ಉತ್ಸವದ ಪ್ರಶಸ್ತಿ ಮುಂತಾದ ಪ್ರಶಸ್ತಿ ದೊರೆತಿದ್ದು, ಅನೇಕ ಸ್ಥಳಗಳಲ್ಲಿ ವಿಶೇಷ ಸನ್ಮಾನ ನಡೆದಿದೆ.

‘ಸಮ್ಮೇಳನಾಧ್ಯಕ್ಷೆ ಚಂದ್ರಕಲಾ ಹಾರಕೂಡೆ ಉತ್ತಮ ಸಾಹಿತಿ ಆಗಿದ್ದಾರೆ. ಹೊಸ ತಾಲ್ಲೂಕು ರಚನೆಯಾದ ನಂತರ ಪ್ರಥಮ ಸಮ್ಮೇಳನ ಇದಾಗಿರುವ ಕಾರಣ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತದೆ’ ಎಂದು ಹುಲಸೂರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಡಾ.ಶಿವಲೀಲಾ ಮಠಪತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.