ADVERTISEMENT

ಬಸವಕಲ್ಯಾಣದಲ್ಲಿ ಸ್ವಚ್ಛತಾ ಅಭಿಯಾನ

ನಗರಸಭೆ ಅಧಿಕಾರಿಗಳಿಗೆ ಶಾಸಕ ಶರಣು ಸಲಗರ ಗಡುವು

​ಪ್ರಜಾವಾಣಿ ವಾರ್ತೆ
Published 13 ಮೇ 2021, 2:32 IST
Last Updated 13 ಮೇ 2021, 2:32 IST
ಬಸವಕಲ್ಯಾಣದ ನಗರಸಭೆಯಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶರಣು ಸಲಗರ, ಅಧ್ಯಕ್ಷೆ ನಾಹೀದಾ ಸುಲ್ತಾನಾ, ಪೌರಾಯುಕ್ತ ಗೌತಮಬುದ್ಧ ಕಾಂಬಳೆ ಪಾಲ್ಗೊಂಡಿದ್ದರು
ಬಸವಕಲ್ಯಾಣದ ನಗರಸಭೆಯಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶರಣು ಸಲಗರ, ಅಧ್ಯಕ್ಷೆ ನಾಹೀದಾ ಸುಲ್ತಾನಾ, ಪೌರಾಯುಕ್ತ ಗೌತಮಬುದ್ಧ ಕಾಂಬಳೆ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ನಗರದಲ್ಲಿನ ಚರಂಡಿ ಗಳು ಕೆಸರು ಹಾಗೂ ಕಲ್ಮಷಯುಕ್ತ ನೀರಿನಿಂದ ತುಂಬಿಕೊಂಡಿದ್ದರಿಂದ ಯಾವುದೇ ಓಣಿಯಲ್ಲಿ ಸಂಚರಿಸಿದರೂ ಮೂಗು ಮುಚ್ಚಿಕೊಂಡು ಹೋಗಬೇಕಾಗುತ್ತಿದೆ. ಆದ್ದರಿಂದ ಮೇ 24ರವರೆಗೆ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು’ ಎಂದು ಶಾಸಕ ಶರಣು ಸಲಗರ ನಗರಸಭೆ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.

ನಗರಸಭೆಯಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಲಾಕ್‌ಡೌನ್‌ ಕಾರಣ ಜನರು ಹಾಗೂ ವಾಹನಗಳು ರಸ್ತೆಗೆ ಬರುತ್ತಿಲ್ಲ. ಆದ್ದರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಯಾವುದೇ ಅಡೆತಡೆಗಳು ಇರುವುದಿಲ್ಲ. ಅಲ್ಲದೆ ಶೀಘ್ರವೇ ಮಳೆಗಾಲ ಬರುವುದರಿಂದ ಚರಂಡಿಗಳಲ್ಲಿನ ಕೆಸರು, ಕಲ್ಲು, ಮಣ್ಣು ಮೊದಲೇ ಖಾಲಿ ಮಾಡಿದರೆ ಯಾವುದೇ ಸಮಸ್ಯೆ ತಲೆದೂರದೆ ನೀರು ಸರಾಗವಾಗಿ ಮುಂದಕ್ಕೆ ಸಾಗುತ್ತದೆ. ಮನೆಗಳ ಅಕ್ಕಪಕ್ಕ ಕಸ ಬೀಸಾಡದೆ ಸ್ವಚ್ಛತೆ ಕಾಯ್ದುಕೊಳ್ಳಲು ಜಾಗೃತಿ ಮೂಡಿಸಬೇಕು. ನಾನೂ ಮನೆಮನೆಗೆ ಹೋಗಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಮೊದಲು ನಾವು ಸುಧಾರಣೆಯಾದರೆ ಜನರು ನಮಗೆ ಹೊಂದಿಕೊಳ್ಳುತ್ತಾರೆ. ಎರಡು ವಾರ್ಡ್‌ಗಳನ್ನು ಮಾದರಿ ಯನ್ನಾಗಿ ರೂಪಿಸಬೇಕು’ ಎಂದರು.

ADVERTISEMENT

‘ಕಟ್ಟಡ ಕಾಮಗಾರಿ ಪರವಾನಗಿ, ಮ್ಯುಟೇಶನ್, ಖಾತಾ ಬದಲಾವಣೆ, ತೆರಿಗೆ ಪಾವತಿಸಿಕೊಳ್ಳುವುದು ಹಾಗೂ ಇತರೆ ಕಾರ್ಯಕ್ಕೆ ವಿಳಂಬ ಮಾಡಿದರೆ ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಗರದಲ್ಲಿನ ಎಲ್ಲ ಓಣಿಗಳಲ್ಲಿನ ಪ್ರತಿ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸಿರುವ ಮಾಹಿತಿ ನೀಡಲಾಗಿದ್ದರೂ ಅರ್ಧದಷ್ಟು ದೀಪಗಳು ಬೆಳಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಲು’ ಸೂಚಿಸಿದರು.

‘ಈಚೆಗೆ ನಗರಸಭೆಯಿಂದ ₹34 ಲಕ್ಷದಲ್ಲಿ ಖರೀದಿಸಿದ ಕಸ ವಿಲೇವಾರಿ ವಾಹನ ನಿಂತಲ್ಲೇ ನಿಂತಿದೆ ಎಂಬ ದೂರುಗಳಿದ್ದು ಇದಕ್ಕೆ ಕಾರಣವೇನು? ₹10 ಲಕ್ಷ ವೆಚ್ಚದಲ್ಲಿ ಕೆಲ ಸ್ಥಳಗಳಲ್ಲಿ ಮಳೆ ನೀರು ಮರುಪೂರಣ ವ್ಯವಸ್ಥೆ ಕೈಗೊಂಡಿರುವ ಬಗ್ಗೆ ದಾಖಲೆಗಳಿದ್ದು ಕೆಲಸ ಪೂರ್ಣಗೊಂಡಿದೆಯೇ? 5 ಸ್ಥಳಗಳಲ್ಲಿ ಇ-ಟಾಯ್ಲೆಟ್ ಕೈಗೊಳ್ಳಲು ಮಂಜೂರಾತಿ ದೊರೆತಿರುವ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು’ ಎಂದರು.

‘14 ಮತ್ತು 15 ನೇ ಹಣಕಾಸು ಯೋಜನೆಯ, ಎಸ್.ಎಫ್.ಸಿ ಅನುದಾನ, ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿನ ಯೋಜನೆಗಳ ಪೂರ್ಣ ಮಾಹಿತಿ ನೀಡಬೇಕು. ಬಾಕಿ ಉಳಿದ ಕೆಲಸವನ್ನು ಶೀಘ್ರ ಕೈಗೊಳ್ಳಬೇಕು. ಯಾವುದೇ ಓಣಿಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕಾಳಜಿ ವಹಿಸಬೇಕು. ನಗರಸಭೆಯ ಕಾಯಂ, ಗುತ್ತಿಗೆ ಆಧಾರದ ಹಾಗೂ ದಿನಗೂಲಿ ನೌಕರರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತಾಗಬೇಕು’ ಎಂದರು.

ಅಧ್ಯಕ್ಷೆ ನಾಹೀದಾ ಸುಲ್ತಾನಾ, ಪೌರಾಯುಕ್ತ ಗೌತಮಬುದ್ಧ ಕಾಂಬಳೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.