ADVERTISEMENT

ಬೀದರ್‌ ದಕ್ಷಿಣ: ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಪೈಪೋಟಿ

ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯದವರೇ ಅಧಿಕ

ಚಂದ್ರಕಾಂತ ಮಸಾನಿ
Published 9 ಫೆಬ್ರುವರಿ 2023, 20:00 IST
Last Updated 9 ಫೆಬ್ರುವರಿ 2023, 20:00 IST
ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ
ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ   

ಬೀದರ್: ವಿಧಾನಸಭೆ ಚುನಾವಣೆಗೆ ಆಗಲೇ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಿದ್ಧತೆ ಆರಂಭಿಸಿವೆ. ಜೆಡಿಎಸ್‌ ಮಾತ್ರ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡದಿದ್ದರೂ ಟಿಕೆಟ್‌ ಆಕಾಂಕ್ಷಿಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರವೇ ಹೆಚ್ಚು ಚರ್ಚೆಯಲ್ಲಿದೆ. ಮಾಜಿ ಶಾಸಕ ಅಶೋಕ ಖೇಣಿ ಇದೇ ಕ್ಷೇತ್ರದವರು ಆಗಿದ್ದಾರೆ. ಅಂತೆಯೇ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್‌ ಆಯ್ಕೆ ಸಮಿತಿಯು ಆಕಾಂಕ್ಷಿಗಳಿಂದ ಅರ್ಜಿ ಕರೆದಿದ್ದಾಗ ಖೇಣಿ ಬೆಂಬಲಿಸುವ ಉದ್ದೇಶದಿಂದ ಇನ್ನಿಬ್ಬರು ಅರ್ಜಿ ಸಲ್ಲಿಸಿದ್ದರು. ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿಗಳು ಆಕಾಂಕ್ಷಿಗಳ ಸಂದರ್ಶನ ನಡೆಸಿದ ಸಂದರ್ಭದಲ್ಲೂ ಖೇಣಿ ಅವರಿಗೆ ಟಿಕೆಟ್‌ ಕೊಡುವುದಾದರೆ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡಿರುವುದು ಗುಟ್ಟಾಗಿ ಉಳಿದಿಲ್ಲ.

ಕಾಂಗ್ರೆಸ್‌ನ ಇನ್ನೊಬ್ಬ ಮುಖಂಡ ಬಸವರಾಜ ಬುಳ್ಳಾ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಸದ್ದಿಲ್ಲದಂತೆ ಜನ ಸೇವೆ ಮಾಡುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಕ್ಷದ ಸಂಘಟನೆ ಹಾಗೂ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ ಪಡೆಯುವ ವಿಶ್ವಾಸದಲ್ಲಿ ಇದ್ದಾರೆ.

ADVERTISEMENT


43 ವರ್ಷಗಳ ಅವಧಿಯಲ್ಲಿ ಕೈಗೊಂಡ ಪಕ್ಷ ಸಂಘಟನೆ, ಸೇವೆಗಳು, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಸಂಜಯ ಗಾಂಧಿ ಹಾಗೂ ಮನಮೋಹನ್‌ ಸಿಂಗ್‌ ಅವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರುವುದನ್ನು ಭಾವಚಿತ್ರಗಳ ಸಹಿತ ಕರಪತ್ರಗಳಲ್ಲಿ ಮುದ್ರಿಸಿ ಗ್ರಾಮಾಂತರ ಪ್ರದೇಶದಲ್ಲಿ ಹಂಚುತ್ತಿದ್ದಾರೆ.

‘2017ರಲ್ಲಿ ಕಾಂಗ್ರೆಸ್‌ ಸರ್ಕಾರ ನನ್ನನ್ನು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರನನ್ನಾಗಿ ನೇಮಕ ಮಾಡಿತ್ತು. 18 ತಿಂಗಳಲ್ಲೇ ಒಟ್ಟು 559 ಬಸ್‌ಗಳಲ್ಲಿ 300 ಹಳೆಯ ಬಸ್‌ಗಳನ್ನು ಬದಲಾಯಿಸಿ ಹೊಸ ಬಸ್‌ಗಳನ್ನು ನೀಡಿ ಸಾರಿಗೆ ವ್ಯವಸ್ಥೆಯಲ್ಲಿ ದಾಖಲೆಯ ಕೆಲಸ ಮಾಡಿದ್ದೇನೆ. ಗ್ರಾಮಾಂತರ ಪ್ರದೇಶದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿಸಿ ಬಡವರಿಗೆ ನೆರವಾಗಿದ್ದೇನೆ. ಪಕ್ಷದ ಬಗೆಗಿನ ಸೇವಾಭಾವ ಹಾಗೂ ನನ್ನ ಸಾಮಾಜಿಕ ಕಾಳಜಿಯನ್ನು ಅರಿತ ಪಕ್ಷ ಟಿಕೆಟ್‌ ಕೊಡಲಿದೆ’ ಎಂದು ಬಸವರಾಜ ಬುಳ್ಳಾ ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅಳಿಯ ಚಂದ್ರಾಸಿಂಗ್‌ ಅವರು ಸಹ ಸಾಮಾಜಿಕ ಚಟುವಟಿಕೆ ಹಾಗೂ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಟಿಕೆಟ್‌ಗೆ ಉನ್ನತ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.

ಬೀದರ್, ಕಲಬುರಗಿ ಹಾಗೂ ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜನ ಬಿರಾದಾರ ಪರಿಹಾರ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಬುಡಾ ಮಾಜಿ ಅಧ್ಯಕ್ಷ ಸಂಜಯ ಜಾಗೀರದಾರ್‌, ಕೆ.ಎಸ್‌.ಪ್ರಭಾಕರ ಪಕ್ಷದ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟದ ಸಮಿತಿಯು ಬಸವರಾಜ ಬಳ್ಳಾ, ಅಶೋಕ ಖೇಣಿ ಹಾಗೂ ಚಂದ್ರಾಸಿಂಗ್‌ ಹೆಸರು ಶಿಫಾರಸು ಮಾಡಿರುವ ಮಾಹಿತಿ ಇದೆ.

ಬೆಲ್ದಾಳೆಯಿಂದ ಮೂರನೇ ಪ್ರಯತ್ನ:

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅವರು ಒಮ್ಮೆ ಕೆಜೆಪಿಯಿಂದ, ಇನ್ನೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಗೆಲ್ಲಲೇ ಬೇಕೆಂಬ ಛಲದೊಂದಿಗೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಪಕ್ಷ ಆರಂಭಿಸಿರುವ ವಿಜಯ ಸಂಕಲ್ಪ ಯಾತ್ರೆಯ ಪೂರ್ಣ ಲಾಭ ಪಡೆದುಕೊಳ್ಳಲು ಯತ್ನಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರ ಮನ ಗೆಲ್ಲಲು ಪ್ರಯತ್ನಿಸಿದ್ದಾರೆ. ಹಿಂದಿನ ಎರಡು ಚುನಾವಣೆಯಲ್ಲಿ ಕಡಿಮೆ ಮತಗಳು ಬಂದಿರುವ ಗ್ರಾಮಗಳಲ್ಲೇ ಹೆಚ್ಚು ಪ್ರಚಾರ ಕೈಗೊಂಡಿದ್ದಾರೆ.

‘ಈ ಬಾರಿ ಎಲ್ಲ ರೀತಿಯ ತಯಾರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಆಗಲೇ ಪ್ರಚಾರವನ್ನೂ ಆರಂಭಿಸಿದ್ದೇನೆ. ಪಕ್ಷದ ಟಿಕೆಟ್ ನನಗೇ ದೊರೆಯಲಿದೆ. ಪಕ್ಷದ ವರಿಷ್ಠರ ಮೇಲೆ ವಿಶ್ವಾಸ ಇದೆ’ ಎಂದು ಶೈಲೇಂದ್ರ ಬೆಲ್ದಾಳೆ ಹೇಳುತ್ತಾರೆ.

ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿ ಸೋತಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಸಂಜಯ ಖೇಣಿ ಹಿಂದೆಯೇ ಬಿಜೆಪಿಗೆ ಬಂದಿದ್ದಾರೆ. ಬೀದರ್‌ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ವರಿಷ್ಠರ ಮೇಲೆ ಟಿಕೆಟ್‌ಗಾಗಿ ಒತ್ತಡ ಹಾಕುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

‘ಮೊದಲೇ ಪ್ರಚಾರ ಆರಂಭಿಸಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದಿಲ್ಲ. ಬೀದರ್‌ ದಕ್ಷಿಣ ಕ್ಷೇತ್ರದಿಂದ ಪಕ್ಷದ ವರಿಷ್ಠರಿಗೆ ಟಿಕೆಟ್‌ ಕೇಳಿದ್ದೇನೆ. ಪಕ್ಷ ನನ್ನ ಸೇವೆಯನ್ನು ಪರಿಗಣಿಸಲಿದೆ’ ಎಂದು ಸಂಜಯ ಖೇಣಿ ಹೇಳುತ್ತಾರೆ.

ಜೆಡಿಎಸ್‌ನಿಂದ ಬಿರುಸಿನ ಪ್ರಚಾರ:

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ಹಾಲಿ ಶಾಸಕ ಬಂಡೆಪ್ಪ ಕಾಶೆಂಪುರ ಅವರಿಗೆ ಟಿಕೆಟ್‌ ಘೋಷಣೆ ಮಾಡಿ ಕ್ಷೇತ್ರದಲ್ಲಿ ಯಾತ್ರೆ ಕೈಗೊಂಡು ಬಿರುಸಿನ ಪ್ರಚಾರ ಮಾಡಿದ್ದಾರೆ. ಗ್ರಾಮ ವಾಸ್ತವ್ಯ ಮಾಡಿ ಜನರ ನಾಡಿಮಿಡಿತ ಅರಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಸಹ ಆಗಲೇ ಗ್ರಾಮ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಶುರು ಮಾಡಿದ್ದಾರೆ.

ಬಂಡೆಪ್ಪ ಕಾಶೆಂಪುರ ಅವರು ತಮ್ಮ ಊರಾದ ಕಾಶೆಂಪುರದಲ್ಲೇ ಪಕ್ಷದ ಕಚೇರಿ ತೆರೆದು ಅಲ್ಲಿಂದಲೇ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಹಳ್ಳಿಗಳಿಗೆ ಭೇಟಿ ಕೊಟ್ಟು ಜನರ ಮನವೊಲಿಸುವಲ್ಲಿ ನಿರತವಾಗಿದ್ದಾರೆ.


ಹಿಂದುಳಿದ ವರ್ಗದವರೇ ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಅವಕಾಶ ಇದೆ ಎಂದು ಬಿಎಸ್‌ಪಿ ಮುಖಂಡರು ಭಾವಿಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಸಭೆಯನ್ನೂ ನಡೆಸಿದ್ದಾರೆ. ಆದರೆ, ಈವರೆಗೂ ಪ್ರಭಾವಿ ನಾಯಕರನ್ನು ಆಯ್ಕೆ ಮಾಡಿಲ್ಲ.

..........................................

ಬೀದರ್‌ ದಕ್ಷಿಣ

.............................

ಬಂಡೆಪ್ಪ ಕಾಶೆಂಪುರ

ಹಾಲಿ ಶಾಸಕ (ಜೆಡಿಎಸ್)

.......................................

‌ಹಾಲಿಮತದಾರರ ವಿವಿರ

101920 ಪುರುಷರು, 94700 ಮಹಿಳೆಯರು, 3 ತತೀಯ ಲಿಂಗಿಗಳು, ಒಟ್ಟು 1,96,623

....................

ಚುನಾವಣೆ ಮತಗಳ ವಿವರ

ಪಕ್ಷಗಳು –2018 –2013–2008

ಬಿಜೆಪಿ –42126 –11,560–30,783

ಜೆಡಿಎಸ್ –54,748–31,975–32,054

ಕಾಂಗ್ರೆಸ್–34,896 –47,763–2,544

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.