ವಿನಯಕುಮಾರ ಸೊರಕೆ
ಬೀದರ್: ‘ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪ್ರತಿ ಬೂತ್‌ನಿಂದ ಇಬ್ಬರು ‘ಡಿಜಿಟಲ್ ಯೂತ್’ಗಳನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ ಸೊರಕೆ ತಿಳಿಸಿದರು.
ಬೂತ್, ಪಂಚಾಯಿತಿ ಮಟ್ಟದಿಂದ ಇಬ್ಬರನ್ನು ಆಯ್ಕೆ ಮಾಡಿ ಜವಾಬ್ದಾರಿ ವಹಿಸಲಾಗುವುದು. ಕಾಂಗ್ರೆಸ್ ಪಕ್ಷದ ಇತಿಹಾಸ, ಅದರ ತತ್ವ– ಸಿದ್ಧಾಂತಗಳು ಹಾಗೂ ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಇವರು ಮಾಡಲಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಾದ್ಯಂತ ಸುಮಾರು 1 ಲಕ್ಷ ಡಿಜಿಟಲ್ ಯೂತ್‌ಗಳನ್ನು ನೇಮಕ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೆ ಪ್ರಚಾರ ಸಮಿತಿಗೆ ಪ್ರಾಮುಖ್ಯತೆ ಇರಲಿಲ್ಲ. ಈಗ ಹೆಚ್ಚಿನ ಮಹತ್ವ ನೀಡಲಾಗಿದೆ. ಪಕ್ಷದ ಎಲ್ಲ ಅಂಗ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, 23 ಜನ ಪದಾಧಿಕಾರಿಗಳನ್ನು ಒಳಗೊಂಡ ಬ್ಲಾಕ್ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಇದರಲ್ಲಿ ಮಹಿಳೆಯರು ಸೇರಿದಂತೆ ವಿವಿಧ ವರ್ಗದವರಿಗೆ ಸಾಮಾಜಿಕ ನ್ಯಾಯದಡಿ ಪ್ರಾತಿನಿಧ್ಯ ನೀಡಲಾಗುವುದು ಎಂದರು.
ಈ ಸಮಿತಿ 365 ದಿನ ಸತತವಾಗಿ ಪಕ್ಷದ ಬಗ್ಗೆ ಪ್ರಚಾರ ಕೈಗೊಳ್ಳುವ ಕೆಲಸ ಮಾಡಲಿದೆ. ಈ ಸಂಬಂಧ ಈಗಾಗಲೇ ರಾಜ್ಯದ 25 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದ್ದೇನೆ. ಮಿಕ್ಕುಳಿದ ಜಿಲ್ಲೆಗಳ ಪ್ರವಾಸ ಇಷ್ಟರಲ್ಲೇ ಮುಗಿಯಲಿದ್ದು, ಆನಂತರ ಸಂಘಟನಾ ಕೆಲಸ ಶುರುವಾಗಲಿದೆ. ಬೂತ್ ಮಟ್ಟದಲ್ಲಿ ನಮ್ಮ ಪಕ್ಷಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳು ತಲುಪಬೇಕು ಎನ್ನವುದು ನಮ್ಮ ಉದ್ದೇಶ ಎಂದು ಹೇಳಿದರು.
ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೊಡ್ಡ ಮಟ್ಟದ ಹೋರಾಟ ಆರಂಭಿಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ತರಬೇತಿ ಕೊಟ್ಟು ಮತದಾರರ ಪಟ್ಟಿಯ ಮೇಲೆ ನಿಗಾ ವಹಿಸಲು ಜವಾಬ್ದಾರಿ ವಹಿಸಲಾಗುವುದು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುನ್ನವೇ ಈ ಕೆಲಸ ಪ್ರಾರಂಭವಾಗಲಿದೆ ಎಂದರು.
ಪ್ರಚಾರ ಸಮಿತಿಯ ಉಪಾಧ್ಯಕ್ಷ ಭೀಮಣ್ಣ ಮೇಟಿ, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಎಸ್. ಅಲಿ, ಜಾರ್ಜ್ ಫರ್ನಾಂಡಿಸ್, ಹಣಮಂತ ಚವಾಣ್ ಮತ್ತಿತರರು ಇದ್ದರು.
‘ಶಾಡೋ ಪಿಎಂಗೆ ಧಮ್ಕಿ ಸರಿಯಲ್ಲ’
‘ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರು. ಅವರು ಶಾಡೋ ಪಿಎಂ. ಚುನಾವಣಾ ಆಯೋಗ ಅವರಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ’ ಎಂದು ವಿನಯಕುಮಾರ ಸೊರಕೆ ಹೇಳಿದರು.
ಮತ ಕಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಬೆಳಕು ಚೆಲ್ಲಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿ, ಪರಿಶೀಲಿಸಬೇಕು. ಅದು ಬಿಟ್ಟು ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ಧಮ್ಕಿ ಹಾಕುತ್ತಿರುವುದು ಸರಿಯಲ್ಲ. ಈಗ ಮತ ಕಳ್ಳತನದ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅಲ್ಲಿ ಇತ್ಯರ್ಥವಾಗುತ್ತದೆ ಎಂದು ತಿಳಿಸಿದರು.
‘ಜಿಲ್ಲಾ ಕಾಂಗ್ರೆಸ್ ಸರಿಪಡಿಸಲು ಕೆಲಸ’
ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಸರಿಪಡಿಸುವ ಕೆಲಸ ಮಾಡಲಾಗುವುದು. ಆದಷ್ಟು ಶೀಘ್ರದಲ್ಲಿಯೇ ಆ ಕೆಲಸ ಶುರುವಾಗುತ್ತದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ ಸೊರಕೆ ತಿಳಿಸಿದರು.
ಬಿಜೆಪಿ ಕೇಡರ್ ಹೊಂದಿರುವ ಪಕ್ಷ. ತಳಮಟ್ಟದಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸುವ ಪಕ್ಷ ಎಂಬಂತಾಗಿದೆ. ಸಂಘಟನೆಯಲ್ಲಿ ಬದಲಾವಣೆ ತರುವುದಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.