ADVERTISEMENT

ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಕಾರ್ಯವೈಖರಿಗೆ ಬೇಸರ

ಜಿಲ್ಲಾ ಕಾಂಗ್ರೆಸ್‌ ಮುಖಂಡರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿಗೆ ನಿರ್ಧಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಜೂನ್ 2025, 6:48 IST
Last Updated 4 ಜೂನ್ 2025, 6:48 IST
ಬಸವರಾಜ ಜಾಬಶೆಟ್ಟಿ
ಬಸವರಾಜ ಜಾಬಶೆಟ್ಟಿ   

ಬೀದರ್‌: ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಬೆಂಗಳೂರಿನ ‘ರ್‍ಯಾಡಿಸನ್‌ ಬ್ಲೂ’ ಹೋಟೆಲ್‌ನಲ್ಲಿ ಮಂಗಳವಾರ ಸಭೆ ಸೇರಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇಬ್ಬರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ದೂರು ಸಲ್ಲಿಸಲು ಮುಖಂಡರು ತೀರ್ಮಾನಿಸಿದ್ದಾರೆ.

ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಮೇ 10ರಂದು ಕೂಡ ಬೆಂಗಳೂರಿನಲ್ಲಿ ಸಭೆ ಸೇರಿದ್ದರು. ಮುಂದೆ ಏನು ಮಾಡಬೇಕೆಂಬುದರ ಕುರಿತು ಚರ್ಚಿಸಲು ಮುಂದಿನ ಸಭೆಯಲ್ಲಿ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದರು. ಅದರಂತೆ ಮಂಗಳವಾರ (ಜೂ.3) ಸಭೆ ಸೇರಿ ಸುದೀರ್ಘವಾಗಿ ಚರ್ಚಿಸಿ, ಸಿಎಂ, ಡಿಸಿಎಂಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

ADVERTISEMENT


ಅಸಮಾಧಾನಕ್ಕೆ ಕಾರಣವೇನು?:

ಸಭೆ ಸೇರಿದ ಮುಖಂಡರು ತಮ್ಮನ್ನು ತಾವು ಪಕ್ಷದ ನಿಷ್ಠಾವಂತರು ಎಂದು ಕರೆದುಕೊಂಡಿದ್ದಾರೆ. ನಿಷ್ಠಾವಂತ ಮುಖಂಡರು, ಕಾರ್ಯಕರ್ತರ ಕಡೆಗಣನೆಯಿಂದ ಪಕ್ಷಕ್ಕೆ ಭವಿಷ್ಯದಲ್ಲಿ ಆಗಬಹುದಾದ ಹಾನಿ ತಪ್ಪಿಸಲು ಈ ಸಭೆ ಕರೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ.

‘ಇಷ್ಟರಲ್ಲೇ ಜಿಲ್ಲಾ ಪಂಚಾಯಿತಿಗೆ ಚುನಾವಣೆಗಳು ನಡೆಯಲಿವೆ. ಆದರೆ, ಪಕ್ಷವನ್ನು ಕಟ್ಟಿ ಬೆಳೆಸಿದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಾರ್ಯಕರ್ತರು ಕೇವಲ ಘೋಷಣೆ ಕೂಗುವುದಕ್ಕಷ್ಟೇ ಬೇಕಾ? ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನು ಗುರುತಿಸಿ ಸ್ಥಾನಮಾನ ಕೊಡುವುದು ಬೇಡವೇ? ಈ ರೀತಿಯಾದರೆ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಪೆಟ್ಟು ಬೀಳುತ್ತದೆ. ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಸೇರಿಕೊಂಡು ಎಲ್ಲ ರೀತಿಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದ ಪಕ್ಷದಲ್ಲಿರುವ ಅನೇಕರಿಗೆ ನೋವಾಗಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಐದು ವರ್ಷಗಳಿಂದ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರೂ ಆ ಸ್ಥಾನದಲ್ಲಿ ಏಕಿದ್ದಾರೆ. ಇಡೀ ಜಿಲ್ಲೆಯಾದ್ಯಂತ ‘ಡಿ’ ಗ್ರುಪ್‌ ಹುದ್ದೆಗಳಿಗೆ ಉಸ್ತುವಾರಿ ಸಚಿವರು ತಮ್ಮ ಸ್ವಕ್ಷೇತ್ರ ಭಾಲ್ಕಿಯವರನ್ನು ನೇಮಕ ಮಾಡುತ್ತಿದ್ದಾರೆ. ಬೇರೆ ಭಾಗದ ಶಾಸಕರು, ಮುಖಂಡರ ಅಭಿಪ್ರಾಯ ಆಲಿಸುತ್ತಿಲ್ಲ. ಈ ದಿನಗಳಿಗಾಗಿ ಕಾರ್ಯಕರ್ತರು ಬೆವರು ಹರಿಸಿ ಇವರನ್ನು ಅಧಿಕಾರಕ್ಕೆ ತಂದಿದ್ದಾರೆಯೇ? ಈ ಎಲ್ಲ ವಿಷಯಗಳ ಕುರಿತು ಗಂಭೀರವಾಗಿ ಚರ್ಚಿಸಿದ್ದು, ಶೀಘ್ರದಲ್ಲೇ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿ ವಿಷಯ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಇದು ಪಕ್ಷದ ಆಂತರಿಕ ವಿಚಾರ. ಈ ವಿಷಯ ಈಗಾಗಲೇ ಹೈಕಮಾಂಡ್‌ ಗಮನಕ್ಕೆ ಬಂದಿದೆ. ಹೈಕಮಾಂಡ್‌ ಸಂಬಂಧಿಸಿದವರನ್ನು ಕರೆಸಿ ಸಮಸ್ಯೆ ಬಗೆಹರಿಸಲಿದೆ.
–ಬಸವರಾಜ ಜಾಬಶೆಟ್ಟಿ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್‌ ಸಮಿತಿ

ಸಭೆಯಲ್ಲಿ ಭಾಗವಹಿಸಿದ್ದು ಯಾರ್‍ಯಾರು?

ಕಾಂಗ್ರೆಸ್‌ ಮುಖಂಡರೂ ಆದ ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮನ್ನಾನ್‌ ಸೇಠ್‌ ಸಂಯೋಜಕ ಅಜ್ಮತ್‌ ಪಟೇಲ್‌ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಾಸೀರ ಖಾನ್‌ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಶಂಕರ ರೆಡ್ಡಿ ಹುಮನಾಬಾದ್‌ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್‌ಮಿಯ್ಯಾ ಮುಖಂಡರಾದ ಕೆ.ಪುಂಡಲೀಕರಾವ್‌ ಅರವಿಂದಕುಮಾರ ಅರಳಿ ಲಕ್ಮಣರಾವ ಬುಳ್ಳಾ ರೋಹಿದಾಸ ಘೋಡೆ ರಘುನಾಥರಾವ್‌ ಜಾಧವ ವಿದ್ಯಾ ಸಾಗರ ಶಿಂಧೆ ಗುಂಡುರೆಡ್ಡಿ ಪಂಡಿತ್‌ ಚಿದ್ರಿ ರಮೇಶ ಡಾಕುಳಗಿ ಬಸಿರೋದ್ದಿನ್‌ ಹಾಲಹಿಪ್ಪರ್ಗಾ ಬಸವಂತರಾಯ ದೇಶಮುಖ ಶಿವರಾಜ ದೇಶಮುಖ ಸಂಗಮೇಶ ಪಾಟೀಲ ಚಳಕಾಪೂರ ವೈಜಿನಾಥ ಯನಗುಂದೆ ಓಂಕಾರ ತುಂಬಾ ಗುರುನಾಥ ದುರ್ಗೆ ಮಲ್ಲಿಕಾರ್ಜುನ ಮಹೇಂದ್ರಕುಮಾರ ಶೇಖ ಹಾಜಿ ಶಕೀಲ್‌ ಲಷ್ಕರಿ ಶಿವಮೂರ್ತಿ ಸುಬಾಬೆ ಧನರಾಜ ಹುಪಳಾ ಮತ್ತಿತರರು ಪಾಲ್ಗೊಂಡಿದ್ದರು.

ಬಿಜೆಪಿ ಶಾಸಕನ ಮಾತಿಗೆ ಮಣೆ

‘ಔರಾದ್‌ ವಿಧಾನಸಭಾ ಕ್ಷೇತ್ರದಲ್ಲಿ 40 ವರ್ಷಗಳಿಂದ ಕಾಂಗ್ರೆಸ್‌ ಶಾಸಕರಿಲ್ಲ. ಅಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಅನೇಕ ಮುಖಂಡರು ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಹಾಲಿ ಬಿಜೆಪಿ ಶಾಸಕನ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮಣೆ ಹಾಕುತ್ತಿದ್ದಾರೆ. ಅವರು ಹೇಳಿದ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಜಿಲ್ಲೆಯ ಪ್ರಮುಖ ಆಯಕಟ್ಟಿನ ಜಾಗಗಳಲ್ಲೂ ಬಿಜೆಪಿ ಪರ ಒಲವು ಇರುವ ಅಧಿಕಾರಿಗಳನ್ನು ತಂದು ಕೂರಿಸಲಾಗಿದೆ. ಇದರಿಂದ ಕಾಂಗ್ರೆಸ್ಸಿಗರಿಗೆ ನೋವಾಗಿದೆ’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರೊಬ್ಬರು ಗೋಳು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.