ADVERTISEMENT

ಬೀದರ್ ಜಿಲ್ಲೆಯ ವೈಮಾನಿಕ ಸಮೀಕ್ಷೆಗೆ ಸಿಎಂಗೆ ಮನವರಿಕೆ

ಬೆಳೆ ಹಾನಿ ವೀಕ್ಷಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 13:40 IST
Last Updated 19 ಅಕ್ಟೋಬರ್ 2020, 13:40 IST
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಬಳಿ ಅತಿವೃಷ್ಟಿಯಿಂದಾಗಿ ನೆಲಕ್ಕುರುಳಿದ ಕಬ್ಬು ಬೆಳೆ ವೀಕ್ಷಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಬಳಿ ಅತಿವೃಷ್ಟಿಯಿಂದಾಗಿ ನೆಲಕ್ಕುರುಳಿದ ಕಬ್ಬು ಬೆಳೆ ವೀಕ್ಷಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ   

ಬೀದರ್: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೋಮವಾರ ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಬೆಳೆ ವೀಕ್ಷಿಸಿದರು.

ಬೀದರ್‌ ತಾಲ್ಲೂಕಿನ ಬಾಪೂರ್, ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಹಾಗೂ ಹುಮನಾಬಾದ್‌ ತಾಲ್ಲೂಕಿನ ಹುಡಗಿ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರೊಂದಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಅಪಾರ ಬೆಳೆ ಹಾನಿಯಾಗಿದೆ. ಒಂಬತ್ತು ಜನರು, 63 ಜಾನುವಾರುಗಳು ಮೃತಪಟ್ಟಿವೆ. ಬೀದರ್ ಜಿಲ್ಲೆಯೊಂದರಲ್ಲಿಯೇ 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಬೀದರ್‌ನಲ್ಲಿ ಆಗಿರುವ ಬೆಳೆ ಹಾನಿಯನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಕೇಂದ್ರದ ಎನ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರದ ಎಸ್‌ಟಿಎಫ್ ನಿಧಿಯಡಿ ರೈತರಿಗೆ ಪರಿಹಾರ ದೊರೆಯಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಕ್ಟೋಬರ್ 21ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬೀದರ್ ಜಿಲ್ಲೆಯಲ್ಲೂ ವೈಮಾನಿಕ ಸಮೀಕ್ಷೆ ನಡೆಸುವಂತೆ ಮನವರಿಕೆ ಮಾಡಲಾಗುವುದು’ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಕಣ್ಣು, ಕಿವಿ ಇಲ್ಲದ ದಪ್ಪ ಚರ್ಮದ ಸರ್ಕಾರ ಎಂದು ಟೀಕಿಸಿದ್ದನ್ನು ಖಂಡಿಸಿದ ಅವರು ‘ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿದ್ದಾಗ ಸರ್ಕಾರದ ಚರ್ಮ ಎಷ್ಟು ದಪ್ಪ ಇತ್ತು ಎನ್ನುವುದನ್ನು ತಿಳಿದುಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಸಂಸದ ಭಗವಂತ ಖೂಬಾ, ಬಿಜೆಪಿ ಕಲಬುರ್ಗಿ ವಿಭಾಗ ಪ್ರಮುಖ ಈಶ್ವರಸಿಂಗ್‌ ಠಾಕೂರ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಸೋಮನಾಥ ‍ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.