ADVERTISEMENT

ಕೋವಿಡ್ ಮುಕ್ತ ತಾಲ್ಲೂಕಿಗಾಗಿ ಸಹಕರಿಸಿ

ಜನಜಾಗೃತಿ ಅಭಿಯಾನದಲ್ಲಿ ಶಾಸಕ ಶರಣು ಸಲಗರ ಭಾಗಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 4:17 IST
Last Updated 21 ಮೇ 2021, 4:17 IST
ಬಸವಕಲ್ಯಾಣದಲ್ಲಿ ಗುರುವಾರ ಆಯೋಜಿಸಿದ್ದ ಕೋವಿಡ್ ನಿರ್ಮೂಲನೆ ಅಭಿಯಾನದಲ್ಲಿ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಗುರುವಾರ ಆಯೋಜಿಸಿದ್ದ ಕೋವಿಡ್ ನಿರ್ಮೂಲನೆ ಅಭಿಯಾನದಲ್ಲಿ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ತಾಲ್ಲೂಕು ಕೋವಿಡ್ ಮುಕ್ತವಾಗಿಸಲು ಜನತೆ ಸಹಕರಿಸಬೇಕು’ ಎಂದು ಶಾಸಕ ಶರಣು ಸಲಗರ ವಿನಂತಿಸಿದ್ದಾರೆ.

ನಗರದ ತ್ರಿಪುರಾಂತದಲ್ಲಿ ಗುರುವಾರ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ನಿರ್ಮೂಲನೆ ಸಂಬಂಧ ಆಯೋಜಿಸಿದ್ದ ಜನಜಾಗೃತಿ ಅಭಿಯಾನದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕೋವಿಡ್ ನಿರ್ವಹಣೆಯಲ್ಲಿ ಬೀದರ್ ಜಿಲ್ಲೆ ಪ್ರಥಮ ಬಂದರೆ ಈ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಮೇ 24ರವರೆಗೆ ಲಾಕ್‌ಡೌನ್ ಇರುವವರೆಗೆ ಜನರು ಮನೆಯಿಂದ ಹೊರಬರದೆ ಸಹಕಾರ ನೀಡಿದರೆ ಶೀಘ್ರವೇ ಸೋಂಕಿತರ ಸಂಖ್ಯೆ ಶೂನ್ಯವಾಗುತ್ತದೆ. ಕೋವಿಡ್ ಸರಪಳಿ ಕಡಿದು ಹಾಕುವುದಕ್ಕೆ ಹಾಗೂ ತಳಮಟ್ಟದಿಂದ ಇದನ್ನು ಕಿತ್ತು ಹಾಕುವುದಕ್ಕೆ ತ್ರಿ ಟಿ ಸೂತ್ರ ಅನುಸರಿಸಲಾಗುತ್ತಿದೆ’ ಎಂದರು.

ADVERTISEMENT

‘ಕೋವಿಡ್ ಪಾಸಿಟಿವ್ ಬಂದವರು ಬಡವರಾಗಿದ್ದು ಒಂದೆರಡು ಕೊಠಡಿಗಳಿರುವ ಮನೆಯಲ್ಲಿ ವಾಸಿಸಿದರೆ ಇನ್ನೊಬ್ಬರಿಗೆ ಸೋಂಕು ತಗುಲಬಹುದು. ಆದ್ದರಿಂದ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಇಲ್ಲದವರಿಗಾಗಿ ತಾಲ್ಲೂಕು ಆಡಳಿತದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಅಲ್ಲಿ ದಾಖಲಾದರೆ ಊಟ, ಔಷಧ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದೂ ಹೇಳಿದರು.

‘ಯಾವುದೇ ಲಕ್ಷಣಗಳು ಗೋಚರಿಸಿದರೆ ಸ್ವಯಂ ಆಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯವಿದ್ದರೆ ರ್‍ಯಾಪಿಡ್ ತಪಾಸಣೆ ಕೂಡ ನಡೆಸಲಾಗು ತ್ತದೆ. ಯಾರೂ ಮಾಸ್ಕ್ ಧರಿಸದೆ ಹೊರಗೆ ತಿರುಗಾಡಬಾರದು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಡಾ.ಅಂಬೇಡ್ಕರ್ ವೃತ್ತದಲ್ಲಿ, ಜಾಮೀಯಾ ಮಸೀದಿ ಹತ್ತಿರ, ಬಸ್ ನಿಲ್ದಾಣ ಹಾಗೂ ತ್ರಿಪುರಾಂತ ಪ್ರವಾಸಿ ಮಂದಿರ ಸಮೀಪ ಕೋವಿಡ್ ತಪಾಸಣಾ ಕೇಂದ್ರ ಹಾಗೂ ಸಹಾಯವಾಣಿ ಆರಂಭಿಸಲಾ ಗಿದ್ದು ಇದರ ಉಪಯೋಗ ಪಡೆದು ಕೊಳ್ಳಬೇಕು’ ಎಂದು ಕೇಳಿಕೊಂಡರು.

ಪೌರಾಯುಕ್ತ ಗೌತಮಬುದ್ಧ ಕಾಂಬಳೆ, ತಹಶೀಲ್ದಾರ್ ಸಾವಿತ್ರಿ ಸಲಗರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಷ್ಣುಕಾಂತ ಹಾಗೂ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.

ತಪಾಸಣೆ

ಪಾಸಿಟಿವ್ ಬಂದ ನಂತರವೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದವರ ಮನೆಗಳಿಗೆ ಭೇಟಿ ನೀಡಿ ಶಾಸಕರು ಆರೋಗ್ಯ ವಿಚಾರಿಸಿದರು. ಸ್ಥಳದಲ್ಲಿಯೇ ರ್‍ಯಾಪಿಡ್ ಟೆಸ್ಟ್ ಕೂಡ ಮಾಡಿಸಿದರು. ಕೆಲ ದಿನಗಳ ಹಿಂದೆ ಪಾಸಿಟಿವ್ ಇದ್ದ ಕೆಲವರ ವರದಿ ಈ ಸಂದರ್ಭದಲ್ಲಿ ನೆಗೆಟಿವ್ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.