ADVERTISEMENT

ಬೀದರ್: ನ್ಯಾಯಾಲಯದಿಂದ ಜಿಲ್ಲಾಧಿಕಾರಿಗೆ ವಾರೆಂಟ್ ಆದೇಶ

ಶಾಸಕ ಪ್ರಭು ಚವಾಣ್ ವಿರುದ್ಧದ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 16:31 IST
Last Updated 22 ಮಾರ್ಚ್ 2025, 16:31 IST
ದೀಪಕ್ ಪಾಟೀಲ ಚಾಂದೋರಿ
ದೀಪಕ್ ಪಾಟೀಲ ಚಾಂದೋರಿ   

ಬೀದರ್: ಔರಾದ್ ಶಾಸಕ ಪ್ರಭು ಚವಾಣ್ ವಿರುದ್ಧದ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಸಂಬಂಧಿಧ ವರದಿ ನೀಡದ ಕಾರಣಕ್ಕೆ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಬೀದರ್ ಜಿಲ್ಲಾಧಿಕಾರಿಗೆ ಜಾಮೀನು ಸಹಿತ ವಾರೆಂಟ್ ಜಾರಿಗೆ ಆದೇಶಿಸಿದೆ.

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ₹1 ಲಕ್ಷ ಭದ್ರತೆಯ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಲು ಆದೇಶ ಹೊರಡಿಸಿದೆ.

ಪ್ರಕರಣದ ವಿವರ:

ADVERTISEMENT

ಔರಾದ್ ಶಾಸಕ ಪ್ರಭು ಚವಾಣ್ ಅವರು ನಕಲಿ ದಾಖಲೆ ಸೃಷ್ಟಿಸಿ ಬೀದರ್ ತಾಲ್ಲೂಕಿನ ಕೋಳಾರ(ಬಿ) ಗ್ರಾಮದ ಸರ್ವೇ ಸಂಖ್ಯೆ 102ರಲ್ಲಿರುವ 3 ಎಕರೆ 19 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಔರಾದ್ ತಾಲ್ಲೂಕಿನ ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ ಚಾಂದೋರಿ ಅವರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಚವಾಣ್ ಜತೆಗೆ ಬೀದರ್ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕ ಹಾಗೂ ಬೀದರ್ ಸಬ್ ರಿಜಿಸ್ಟ್ರಾರ್ ಅವರ ಮೇಲೂ ಖಟ್ಲೆ ಹೂಡಿದ್ದರು. ಬೀದರ್ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಒತ್ತುವರಿಗೆ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದ್ದರು. ಜಮೀನು ಕಬಳಿಕೆ ಮಾಡಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಜಮೀನು ಮರಳಿ ಸರ್ಕಾರದ ಸುಪರ್ದಿಗೆ ಪಡೆಯಬೇಕು ಎಂದು ಮನವಿ ಮಾಡಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 2024ರ ಅಕ್ಟೋಬರ್ 5ರಂದು ದೀಪಕ್ ಪಾಟೀಲ ಚಾಂದೋರಿ ಅವರ ಹೇಳಿಕೆ ಪಡೆದಿತ್ತು. 2024ರ ಡಿಸೆಂಬರ್ 12ರ ಒಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಬಳಿಕ ವರದಿ ಸಲ್ಲಿಕೆಗೆ 2025ರ ಫೆಬ್ರುವರಿ 21ರವರೆಗೆ ಕಾಲಾವಕಾಶ ನೀಡಿತ್ತು. ತದ ನಂತರ ಮಾರ್ಚ್ 13ರ ವರೆಗೆ ಕಾಲಾವಕಾಶ ಕೊಟ್ಟಿತ್ತು. ಆದರೂ, ಜಿಲ್ಲಾಡಳಿತ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗೆ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಆದೇಶಿಸಿದೆ.

‘ಶಾಸಕ ಪ್ರಭು ಚವಾಣ್ ಅವರ ವಿರುದ್ಧದ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದಲ್ಲಿ ಜಿಲ್ಲಾಡಳಿತ ರಾಜಕೀಯ ಪ್ರಭಾವಕ್ಕೆ ಮಣಿದು ವರದಿ ಸಲ್ಲಿಸಿಲ್ಲ’ ಎಂದು ಪ್ರಕರಣದ ದೂರುದಾರ ದೀಪಕ್ ಪಾಟೀಲ ಚಾಂದೋರಿ ಆರೋಪಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.