ADVERTISEMENT

ಹುಮನಾಬಾದ್‌: ಕೋವಿಡ್‌–19ಗೆ ನಾಲ್ವರು ಸಾವು

ತಾಲ್ಲೂಕಿನ ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 2 ಮೇ 2021, 7:27 IST
Last Updated 2 ಮೇ 2021, 7:27 IST
ಜಗನ್ನಾಥ
ಜಗನ್ನಾಥ   

ಹುಮನಾಬಾದ್‌: ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿಗೆ ಶುಕ್ರವಾರ ನಾಲ್ವರು ಮೃತಪಟ್ಟಿದ್ದಾರೆ.

ವಿನಾಯಕ ಯಾದವ: ಪುರಸಭೆ ಮಾಜಿ ಅಧ್ಯಕ್ಷ, ಗಾಂಧಿನಗರ ನಿವಾಸಿ ವಿನಾಯಕ ಯಾದವ (49) ಇಲ್ಲಿನ ಆಸ್ಪತ್ರೆಯಿಂದ ಬೀದರ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ.

ಪಾಸಿಟಿವ್ ಬಂದ ಕಾರಣ 4 ದಿನಗಳ ಹಿಂದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ರಾತ್ರಿ ಬೀದರ್‌ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ರಾತ್ರಿ 12ಕ್ಕೆ ಅಂತ್ಯ ಕ್ರಿಯೆ ನೆರವೇರಿದ್ದು, ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

ADVERTISEMENT

ಮಾಣಿಕ ಸಾಗರ: ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನ ಪ್ರಭಾರಿ ಪ್ರಾಚಾರ್ಯ, ತಾಲ್ಲೂಕಿನ ಗಡವಂತಿ ಗ್ರಾಮದ ಮಾಣಿಕ ಸಾಗರ (50) ಹುಮನಾಬಾದ್‌ ಆಸ್ಪತ್ರೆಗೆ ಸೇರಿ ನಂತರ ಉಸಿರಾಟದ ತೊಂದರೆ ಕಾಣಿಸಿದ್ದರಿಂದ ಕಳೆದ ನಾಲ್ಕೈದು ದಿವಸಗಳ ಹಿಂದೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ರಾತ್ರಿ 10ಕ್ಕೆ ಮೃತರಾಗಿದ್ದು, ನಸುಕಿನ 3 ಗಂಟೆಗೆ ಸ್ವಗ್ರಾಮದಲ್ಲಿ ಅಂತ್ಯೆಕ್ರಿಯೆ ನೆರವೇರಿಸಲಾಗಿದೆ. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಮಹ್ಮದ್‌ ಅಲಿ: ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ, ತಾಲ್ಲೂಕಿನ ಓತಗಿ ಗ್ರಾಮದ ಮಹ್ಮದ್‌ ಅಲಿ (48) ಹುಮನಾಬಾದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಬಂದಿದ್ದು, ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದಿತ್ತು. ಆದರೆ, ಸಿಟಿಸ್ಯ್ಕಾನ್‍ನಲ್ಲಿ ಸ್ವಲ್ಪ ಮಟ್ಟದ ಲಕ್ಷಣ ಕಂಡು ಬಂದಿದ್ದರಿಂದ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದರು ಎನ್ನಲಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಜಗನಾಥ ವಿಭೂತಿ: ಪಟ್ಟಣದ ಪಿಕೆಪಿಎಸ್‍ ಸಿಬ್ಬಂದಿ, ಸ್ಥಳೀಯ ಮಾಶೆಟ್ಟಿ ಬಡಾವಣೆಯ ನಿವಾಸಿ ಜಗನ್ನಾಥ ವಿಭೂತಿ (55) ಅವರಿಗೆ ಕೋವಿಡ್‌–19 ದೃಢಪಟ್ಟ ಕಾರಣ ಲಾತೂರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ನಿಧನರಾಗಿದ್ದು, ಪಟ್ಟಣದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.