ADVERTISEMENT

ಕೋವಿಡ್ ಜಾಗೃತಿ ಖಾನಾಪುರ ಮಾದರಿ

ಸ್ವಯಂ ನಿರ್ಬಂಧ, ಸ್ವಚ್ಛತೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 9:54 IST
Last Updated 5 ಏಪ್ರಿಲ್ 2020, 9:54 IST
ಔರಾದ್ ತಾಲ್ಲೂಕಿನ ಖಾನಾಪುರದಲ್ಲಿ ಕಲಾವಿದರು ಜಾಗೃತಿ ಚಿತ್ರ ಬಿಡಿಸಿರುವುದು
ಔರಾದ್ ತಾಲ್ಲೂಕಿನ ಖಾನಾಪುರದಲ್ಲಿ ಕಲಾವಿದರು ಜಾಗೃತಿ ಚಿತ್ರ ಬಿಡಿಸಿರುವುದು   

ಔರಾದ್: ಕೊರೊನಾ ಸೋಂಕು ಹರಡದಂತೆ ತಾಲ್ಲೂಕಿನ ಖಾನಾಪುರ (ಕೆ) ಗ್ರಾಮಸ್ಥರು ವಿಭಿನ್ನ ರೀತಿಯ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಬೀದರ್‌ನಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಗ್ರಾಮಸ್ಥರು ಸ್ವಯಂ ಕರ್ಫ್ಯೂ ವಿಧಿಸಿಕೊಂಡಿದ್ದಾರೆ. ಗ್ರಾಮದ ಸ್ವಯಂ ಸೇವಕ ಯುವಜನರ ತಂಡವು ಜನರ ಮನೆಬಾಗಿಲಿಗೆ ತೆರಳಿ ದಿನಸಿ ಸಾಮಗ್ರಿ, ತರಕಾರಿ ಪೂರೈಸು್ತಿದೆ. ಎಲ್ಲರೂ ಮಾಸ್ಕ್‌ ಜೊತೆಗೆ ಸೂಕ್ತ ರಕ್ಷಾ ಕವಚ ಬಳಸುತ್ತಿದ್ದಾರೆ.

‘ಖಾನಾಪುರದ ಜನರು ಜಾಗೃತ ಮನಸ್ಸಿನವರು. ಕೊರೊನಾ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಇದೆ. ಗ್ರಾಮದ ಪ್ರಮುಖರು ಮತ್ತು ಹಿರಿಯರು ಮನೆಮನೆಗೆ ತೆರಳಿ, ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ತಿಳಿಸಿದರು.

ADVERTISEMENT

‘ಗ್ರಾಮದಲ್ಲಿ ಯುವ ಕಲಾವಿದರ ಬಳಗವಿದ್ದು, ಅವರು ಕೊರೊನಾ ಕುರಿತು ಆಸಕ್ತಿಕರ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಮಾಸ್ಕ್ ಧರಿಸುವುದರ ಜೊತೆಗೆ ಮನೆಯಲ್ಲೇ ಉಳಿದು ಆರೋಗ್ಯ ಕಾಪಾಡಿಕೊಳ್ಳುವಿಕೆ ಕುರಿತು ಚಿತ್ರಗಳ ಮೂಲಕವೇ ಜನರಿಗೆ ತಿಳಿಪಡಿಸುತ್ತಿದ್ದಾರೆ’ ಎಂದರು.

'ಕೊರೊನಾ ಸೋಂಕು ವಿರುದ್ಧ ನಾವು ಸಮರ ಸಾರಿದ್ದೇವೆ. ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ಊರು ಪ್ರವೇಶಿಸದಿರಲಿಯೆಂದು ಸಂಕಲ್ಪ ಮಾಡಿದ್ದೇವೆ. ಹೊಸಬರು ನಮ್ಮ ಊರಿಗೆ ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತೇವೆ’ ಎಂದು ಗ್ರಾಮಸ್ಥ ಶಂಕ್ರಯ್ಯ ಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.