ADVERTISEMENT

ಕೋವಿಡ್ ನಿರ್ವಹಣೆ: ಅಸಮಾಧಾನ

ಔಷಧಿ ಸಂಗ್ರಹಿಸಿಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:17 IST
Last Updated 1 ಮೇ 2021, 7:17 IST

ಬೀದರ್: ‘ಕೋವಿಡ್ ಸೋಂಕಿನಿಂದ ಇಡೀ ರಾಜ್ಯದಲ್ಲೇ ಬೀದರ್‌ನಲ್ಲಿ ಹೆಚ್ಚು ಸಾವುಗಳು ಸಂಭವಿಸಿವೆ. ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಮರ್ಪಕವಾಗಿ ಆಗಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ ಆರೋಗ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ರಿಮ್ಸ್‌ನಲ್ಲಿ ಮಾನವ ಸಂಪನ್ಮೂಲ ಸಾಕಷ್ಟಿದೆ. ವೈದ್ಯರು ಮತ್ತು ಸಿಬ್ಬಂದಿ ಸೇರಿ 800 ಜನರಿದ್ದಾರೆ. ನಾಲ್ಕು ತಾಲ್ಲೂಕುಗಳಲ್ಲಿ ತಲಾ ಎಂಟು ಜನರು ವಿಶೇಷ ತಜ್ಞ ವೈದ್ಯರಿದ್ದಾರೆ. ಇಷ್ಟೆಲ್ಲ ವೈದ್ಯಕೀಯ ಸಿಬ್ಬಂದಿ ಇದ್ದಾಗಲೂ ಜನರಿಂದ ವೈದ್ಯರಿಲ್ಲ, ಚಿಕಿತ್ಸೆ ಸಿಗುತ್ತಿಲ್ಲ, ಇಂಜೆಕ್ಷನ್ ಕೊಡುತ್ತಿಲ್ಲ ಎನ್ನುವ ದೂರುಗಳು ಬರುವುದು ಸರಿಯಲ್ಲ. ಲಭ್ಯವಿರುವ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡರೆ ಈಗ ಎದುರಾಗಿರುವ ಸವಾಲನ್ನು ನಿಭಾಯಿಸಬಹುದು’ ಎಂದು ಹೇಳಿದರು.

ADVERTISEMENT

‘ಇಂಜಕ್ಷನ್ ಸೇರಿದಂತೆ ವೈದ್ಯಕೀಯ ಸೌಕರ್ಯ ಈಗ ಅತಿ ಅವಶ್ಯಕವಾಗಿದೆ. ಅನಧಿಕೃತವಾಗಿ ಯಾವುದಾದರೂ ಖಾಸಗಿ ಆಸ್ಪತ್ರೆಯವರು ಮಹತ್ವದ ಔಷಧಿ ಸಂಗ್ರಹಿಸಿಟ್ಟುಕೊಂಡಿರುವುದು ಕಂಡು ಬಂದಲ್ಲಿ, ಅಂಥವರ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು.

ಕೋವಿಡ್ ಪಾಸಿಟಿವ್ ಬರುವವರಿಗೆ ಮೊದಲು ನೈತಿಕ ಸ್ಥೈರ್ಯ ತುಂಬಬೇಕು. ಅವರಿಗೆ ಹೆಲ್ತ್ ಕಿಟ್ ಕೊಡಬೇಕು. ಆರೋಗ್ಯ ಇಲಾಖೆಯ ಕಿಟ್‍ಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಹೋಮ್ ಐಸೊಲೇಶನ್‍ನಲ್ಲಿ ಇದ್ದರೂ ಕೋವಿಡ್ ನಿಂದ ಗುಣಮುಖರಾಗಬಹುದು ಎಂದು ಹೇಳಿದರು.

‘ಎಷ್ಟೋ ಜನರಿಗೆ ಹೇಗೆ ಮಾಸ್ಕ್ ಬಳಸಬೇಕು ಎನ್ನುವುದು ಕೂಡ ಗೊತ್ತಿಲ್ಲ. ನಿಯಮಗಳನ್ನು ಬಿಗಿಗೊಳಿಸಿ ದಂಡ ವಿಧಿಸಿ ಜನರಲ್ಲಿ, ಶಿಸ್ತುಬದ್ಧ ಮಾಸ್ಕ್ ಸಂಸ್ಕೃತಿ ಬೆಳೆಯುವಂತೆ ಕ್ರಮ ವಹಿಸಬೇಕು’ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗಲಿ: ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 50 ಆಕ್ಸಿಜನ್ ಬೆಡ್‌ಗಳು ಇರಬೇಕು. ಕನಿಷ್ಠ ಚಿಕಿತ್ಸೆಯು ತಾಲ್ಲೂಕು ಆಸ್ಪತ್ರೆಗಳಲ್ಲಿಯೇ ಸಿಗುವಂತಾದಲ್ಲಿ ಜಿಲ್ಲಾ ಆಸ್ಪತ್ರೆಗೆ ಮೇಲಿನ ಹೊರೆ ತಪ್ಪಲಿದೆ ಎಂದು ತಿಳಿಸಿದರು.

ಬಾಕ್ಸ್–1

‘ರೆಮ್‍ಡಿಸಿವಿರ್ ಸರಿಯಾಗಿ ಪೂರೈಸಿ’

ಬೀದರ್: ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ರೆಮ್‍ಡಿಸಿವಿರ್ ಇಂಜಕ್ಷನ್ ಪೂರೈಸಿ, ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಹೆಚ್ಚಿಸಿ, ಮನೆಯಲ್ಲಿ ಐಸೊಲೇಶನ್‍ನಲ್ಲಿ ಇರುವವರಿಗೆ ಸೂಕ್ತ ಚಿಕಿತ್ಸೆ ಒದಗಿಸಿ, ವೈದ್ಯಕೀಯ ಮಾನವ ಸಂಪನ್ಮೂಲ ಸರಿಯಾಗಿ ಬಳಸಿಕೊಳ್ಳಿ, ಬ್ರಿಮ್ಸ್ ವ್ಯವಸ್ಥೆ ಸುಧಾರಿಸಿ....

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ ಅವರು ಶುಕ್ರವಾರ ಇಲ್ಲಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮಂಡಿಸಿದ ಬೇಡಿಕೆಗಳು ಇವು.
ಜಿಲ್ಲಾ ಉಸ್ತುವಾರಿ ಸÀಚಿವ ಪ್ರಭು ಚವಾಣ್ ಅವರು ಕೋವಿಡ್ ತಡೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ರಹೀಂಖಾನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ ಮತ್ತು ಚಂದ್ರಶೇಖರ ಪಾಟೀಲ ವಿಡಿಯೊ ಕಾನ್ಫ್‍ರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಲೆ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಪಂ ಸಿಇಓ ಜಹೀೀರಾ ನಸೀಮ್, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಸಿ.ಎಚ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.