ADVERTISEMENT

ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ: ಸಚಿವ ಚವಾಣ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 17:01 IST
Last Updated 24 ನವೆಂಬರ್ 2020, 17:01 IST
ಪ್ರಭು ಚವಾಣ್
ಪ್ರಭು ಚವಾಣ್   

ಬೀದರ್‌: ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಡಿಸೆಂಬರ್ 7 ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಕಾಯ್ದೆಯ ಅನುಷ್ಠಾನ ಕುರಿತ ಅಧ್ಯಯನ ನಡೆಸಲಾಗಿದೆ.
ಇಲಾಖಾ ಅಧಿಕಾರಿಗಳು ಹಾಗೂ ಪರಿಣಿತರೊಂದಿಗೂ ಚರ್ಚಿಸಲಾಗಿದೆ. ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯದ ಒಳಗೆ ಮತ್ತು ಹೊರಗೆ ಗೋಮಾಂಸ ಆಮದು ಹಾಗೂ ರಫ್ತು ಸಂಪೂರ್ಣ ನಿಷೇಧ ಆಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

2010ರಲ್ಲಿ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ 1964ರ ಬದಲಾಗಿ ‘ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010’ನ್ನು ಅಂದಿನ ಸರ್ಕಾರ ವಿಧಾನ ಮಂಡಲದಲ್ಲಿ ಮಂಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆಗ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಜ್ ಅವರು ರಾಷ್ಟ್ರಪತಿ ಅನುಮೋದನೆಗೆ ಕಳುಹಿಸಿದ್ದರಿಂದ ಕಾಯ್ದೆ ಅನುಷ್ಠಾನದಲ್ಲಿ ವಿಳಂಬವಾಯಿತು. ಕೇಂದ್ರ ಗೃಹ ಇಲಾಖೆ ಸಹ ಕೆಲ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರೆಸಿತ್ತು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರುಗಳ ಅಕ್ರಮ ಸಾಗಣೆ, ವಧೆಗಾಗಿ ಜಾನುವಾರುಗಳ ಖರೀದಿ, ಮಾರಾಟ ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ. ದೇಶದಲ್ಲಿ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ರಾಜ್ಯದಲ್ಲೂ ಕಾಯ್ದೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.