ADVERTISEMENT

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯೋಜನೆ

ಉದ್ಯಮಶೀಲತಾ ಪ್ರೇರಣೆ, ಸಂವಾದ ಕಾರ್ಯಕ್ರಮ: ಕಾಶೆಂಪೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 11:27 IST
Last Updated 7 ಡಿಸೆಂಬರ್ 2018, 11:27 IST
ಬೀದರ್‌ನ ಶಾರದಾ ರುಡ್‌ಸೆಟಿಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಪ್ರೇರಣೆ ಹಾಗೂ ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಉದ್ಘಾಟಿಸಿದರು. ರಮೇಶ ಮಠಪತಿ, ಬಾಳಪ್ಪ ಎಂ.ಕಮತಗಿ, ಸುರೇಖಾ ಮುನೋಳಿ ಹಾಗೂ ಪರಮೇಶ್ವರ ಇದ್ದಾರೆ
ಬೀದರ್‌ನ ಶಾರದಾ ರುಡ್‌ಸೆಟಿಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಪ್ರೇರಣೆ ಹಾಗೂ ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಉದ್ಘಾಟಿಸಿದರು. ರಮೇಶ ಮಠಪತಿ, ಬಾಳಪ್ಪ ಎಂ.ಕಮತಗಿ, ಸುರೇಖಾ ಮುನೋಳಿ ಹಾಗೂ ಪರಮೇಶ್ವರ ಇದ್ದಾರೆ   

ಬೀದರ್:‘ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಯುವಜನತೆ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಉದ್ಯೋಗ ಸೃಜನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಮತ್ತು ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಫಲಾನುಭವಿಗಳಿಗೆ ಪ್ರತಾಪನಗರದ ಶಾರದಾ ರುಡ್‌ಸೆಟಿಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಪ್ರೇರಣೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಗರಿಷ್ಠ ₹ 25 ಲಕ್ಷ ಹಾಗೂ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಗರಿಷ್ಠ ₹ 10 ಲಕ್ಷ ವರೆಗೆ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಬ್ಯಾಂಕ್‌ ವ್ಯವಸ್ಥಾಪಕರು ಫಲಾನುಭವಿಗಳೊಂದಿಗೆ ಸರಿಯಾಗಿ ವ್ಯವಹರಿಸಬೇಕು. ಮುತುವರ್ಜಿ ವಹಿಸಿ ಸಾಲ ವಿತರಿಸಬೇಕು. ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಬಾಕಿ ಉಳಿದ ಫಲಾನುಭವಿಗಳಿಗೆ ಒಂದು ವಾರದೊಳಗಾಗಿ ಸಾಲ ಸಿಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ ಪ್ರಧಾನ
ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ 30 ಅರ್ಜಿದಾರರಿಗೆ ಸಾಲ ವಿತರಿಸುವ ಗುರಿಯಿದೆ. ಇಲ್ಲಿಯವರೆಗೆ 41 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅರ್ಹ ಅರ್ಜಿಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ 54 ಅರ್ಜಿದಾರರಿಗೆ ಸಾಲ ವಿತರಿಸುವ ಗುರಿಯಿದ್ದು, 41 ಅರ್ಜಿಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ. ಇದರಲ್ಲಿ 22 ಜನರಿಗೆ ಸಾಲ ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಳಪ್ಪ.ಎಂ.ಕಮತಗಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಪರಮೇಶ್ವರ ಹಾಗೂ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಇದ್ದರು.

ಸಚಿವರು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಮತ್ತು ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.