ADVERTISEMENT

ಬಸವಕಲ್ಯಾಣ| ಹೆಕ್ಟೇರ್‌ಗೆ ₹8,500 ಪರಿಹಾರ ನ್ಯಾಯವಲ್ಲ: ಶಾಸಕ ಸಲಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:03 IST
Last Updated 18 ಅಕ್ಟೋಬರ್ 2025, 6:03 IST
ಬಸವಕಲ್ಯಾಣದಲ್ಲಿ ಶುಕ್ರವಾರ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ ವೃತ್ತಕ್ಕೆ ಬಂದಾಗ ಕಂಡು ಬಂದ ದೃಶ್ಯ
ಬಸವಕಲ್ಯಾಣದಲ್ಲಿ ಶುಕ್ರವಾರ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ ವೃತ್ತಕ್ಕೆ ಬಂದಾಗ ಕಂಡು ಬಂದ ದೃಶ್ಯ   

ಬಸವಕಲ್ಯಾಣ: ‘ಎಕರೆಗೆ ₹1500 ಖರ್ಚು ಇದ್ದಾಗ ಬೆಳೆ ಹಾನಿ ಪರಿಹಾರವಾಗಿ ಹೆಕ್ಟೇರ್‌ಗೆ ₹8500 ಕೊಡುವುದು ನ್ಯಾಯವಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಧನಸಹಾಯ ಒದಗಿಸಬೇಕು. ಎಲ್ಲ ರೈತರ ಸಾಲಮನ್ನಾ ಮಾಡಬೇಕು’ ಎಂದು ಶಾಸಕ ಶರಣು ಸಲಗರ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಬರಗಾಲದ ನಂತರ ಕಲ್ಯಾಣ ಕರ್ನಾಟಕದ ರೈತರಿಗೆ ದೊಡ್ಡ ಸಂಕಟ ಎದುರಾಗಿದೆ. ಧಾರಾಕಾರ ಮಳೆಯಿಂದ ಸೋಯಾಬಿನ್, ತೊಗರಿ ಮತ್ತಿತರೆ ಬೆಳೆಗಳು ನೀರಿನಲ್ಲಿ ನಿಂತಿವೆ. ಅವುಗಳ ಮೇಲೆ ಮೊಳಕೆಯೊಡೆಯುತ್ತಿವೆ. ಆದರೂ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲದ್ದರಿಂದ ಅವರು ಸ್ಪಂದಿಸುತ್ತಿಲ್ಲ. ಕೃಷಿಕರು ಗುಳೆ ಹೋಗುವಂತಾಗಿದ್ದು ನಾನಾ ಸಂಕಟಗಳು ಎದುರಾಗಿವೆ. ಸಾರಾಯಿ ನೀರಿನಂತೆ ಹರಿಸುತ್ತಿದ್ದಾರೆ. ರೈತರಿಗೆ ಕೊಡುವುದಕ್ಕೆ ಇವರ ಹತ್ತಿರ ಹಣವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬೆಳೆವಿಮೆಯ ಕಂತು ಪಾವತಿಸುತ್ತಿದ್ದರೂ ಕೆಲ ವರ್ಷಗಳಿಂದ ಹಣ ಸಿಕ್ಕಿಲ್ಲ. ಏಳು ವರ್ಷದ ಸಮೀಕ್ಷಾ ವರದಿ ಬೇಕೆನ್ನುವ ನಿಯಮ ಸಡಿಲಗೊಳಿಸಿ ಹಾನಿಯಾದಾಗ ತಕ್ಷಣ ವಿಮೆಯ ನೆರವು ದೊರಕುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಹ ಅವರು ಕೇಳಿಕೊಂಡರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ‘ಸರ್ಕಾರ ರೈತರ ನೆರವಿಗೆ ಬಾರದ ಕಾರಣ ಜಿಲ್ಲೆ ಹಾಗೂ ರಾಜ್ಯದ ಇತರೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಹಾಗೂ ಇತರೆ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆ ಡಾ.ಅಂಬೇಡ್ಕರ್ ವೃತ್ತಕ್ಕೆ ಬಂದಾಗ ಸಭೆಯಲ್ಲಿ ರೂಪಾಂತರಗೊಂಡಿತು. ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಬಸವಕಲ್ಯಾಣದಲ್ಲಿ ಶುಕ್ರವಾರ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ ವೃತ್ತಕ್ಕೆ ಬಂದಾಗ ಕಂಡು ಬಂದ ದೃಶ್ಯ
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ ವೃತ್ತಕ್ಕೆ ಬಂದಾಗ ನಡೆದ ಸಭೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು
ಶಾಸಕ ಶರಣು ಸಲಗರ ಅವರು ಬಾರುಕೋಲಿನಿಂದ ಹೊಡೆಸಿಕೊಂಡಿದ್ದರಿಂದ ಬೆನ್ನ ಮೇಲೆ ಉಂಟಾದ ಗಾಯಗಳು

ಶಾಸಕರ ಬೆನ್ನು ಹೊಟ್ಟೆಗೆ ಗಾಯ

ಕೇವಲ ಚಡ್ಡಿ ಹಾಕಿಕೊಂಡು ತಲೆಗೆ ಹಸಿರು ಟವೆಲ್ ಕಟ್ಟಿಕೊಂಡಿದ್ದ ಶಾಸಕ ಶರಣು ಸಲಗರ ಅವರು ತಾವೇ ಬಾರುಕೋಲಿನಿಂದ ಮೈಗೆ ಹೊಡೆದುಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಮುಖವಾಡ ಧರಿಸಿದವರಿಂದಲೂ ಹೊಡೆಸಿಕೊಂಡರು. ಇದರಿಂದ ಬರೆ ಎಳೆದಂತೆ ಗಾಯಗಳಾಗಿ ಅವರ ಬೆನ್ನು ಹೊಟ್ಟೆ ಕೆಂಪುಕೆಂಪಾಗಿತ್ತು. ಪ್ರಖರ ಬಿಸಿಲು ಇದ್ದರೂ ಅರೆಬೆತ್ತಲೆಯಾಗಿ ಮೆರವಣಿಗೆಯಲ್ಲಿ ಸಾಗಿದ್ದರಿಂದ ಹಾಗೂ ಏಟು ಬಿದ್ದಿದ್ದರಿಂದ ಅವರಿಗೆ ನೋವಾಗಿರುವುದು ಅಂದಗೆಟ್ಟ ಮುಖಭಾವದಿಂದ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಗಂಟಲು ಒಣಗಿದಂತಾಗಿತ್ತು. ಆದ್ದರಿಂದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಶಿರಗಾಪುರ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮತ್ತಿತರರು ಕೈಜೋಡಿಸಿ ವಿನಂತಿಸಿದ್ದರಿಂದ ಅವರು ಹೊಡೆಸಿಕೊಳ್ಳುವುದನ್ನು ನಿಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.