ಔರಾದ್: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಮುಂಗಾರು ಬೆಳೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಭಾರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು, ಮತ್ತೆ ಸಾಲದ ಸುಳಿಗೆ ಸಿಲುಕಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಾವಲಗಾಂವ್ ಕೆರೆ ಕೋಡಿ ಒಡೆದು, ನೂರಾರು ಎಕರೆ ಜಮೀನು ಜಲಾವೃತಗೊಂಡಿತ್ತು. ಅಲ್ಲದೆ ರೈತರು ಬೆಳೆದಿದ್ದ ಬೆಳೆಗಳು ಜಲಾವೃತಗೊಂಡು, ಹಾಳಾಗಿದ್ದವು. ಅದರೊಂದಿಗೆ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಅನೇಕ ರೈತರು ಬೀದಿಗೆ ಬಂದಿದ್ದಾರೆ. ಇತ್ತ ಸಾಲ ಏರಿಕೆಯಾಗುತ್ತಿದ್ದರೆ, ಮಳೆ ನಮನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ ಎಂದು ರೈತರ ಗೋಳಾಡುತ್ತಿದ್ದಾರೆ.
‘ಮಳೆ ಹಾಗೂ ಪ್ರವಾಹದಿಂದಾಗಿ ಗ್ರಾಮಗಳಲ್ಲಿನ ಮೂಲಸೌಕರ್ಯಗಳು ಹಾಳಾಗಿವೆ. ಸೇತುವೆಗಳು, ರಸ್ತೆ, ವಿದ್ಯುತ್ ಕಂಬಗಳು ಕಿತ್ತು ಹೋಗಿದ್ದು, ಜನರು ಪರದಾಡುವಂತಾಗಿದೆ. ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆ ಹಾಗೂ ಮಾಂಜ್ರಾ ನದಿಗೆ ಪ್ರವಾಹ ಬಂದು ನದಿ ಪಾತ್ರದ ಹತ್ತಾರು ಗ್ರಾಮಗಳ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಕಬ್ಬು ಹಾಗೂ ಇತರೆ ಬೆಳೆಗಳು ನದಿ ನೀರಿನ ಪ್ರವಾಹದಲ್ಲಿ ಹರಿದು ಹೋಗಿವೆ. ತಾಲ್ಲೂಕಿನ ಶೇ 80ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಮಳೆಯ ಆರ್ಭಟಕ್ಕೆ ದಸರಾ ಹಾಗೂ ದೀಪಾವಳಿ ಹಬ್ಬದ ಸಂತಸವಿಲ್ಲದಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ನಮ್ಮ ನರವಿಗೆ ಬರಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಯಮ್ಯ ಅವರು ಈಚೆಗೆ ವೈಮಾನಿಕ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು ಸಂತಸದ ವಿಷಯ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್‌ಗೆ ಹೆಚ್ಚುವರಿಯಾಗಿ ₹ 8,500 ಘೋಷಣೆ ಮಾಡಿದ್ದು, ಸಮಾಧಾನ ತಂದಿದೆ. ಆದರೆ ಘೋಷಣೆ ಮಾಡಿದ ಪರಿಹಾರ ದೀಪಾವಳಿ ಮುನ್ನ ರೈತರಿಗೆ ತಲುಪಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ಮನವಿ ಮಾಡಿದ್ದಾರೆ.
ಔರಾದ್ ತಾಲ್ಲೂಕಿನಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಮುಂಗಾರು ಬೆಳೆ ಪೂರ್ಣ ಹಾಳಾಗಿದೆ. ಹೀಗಾಗಿ ಬಿತ್ತನೆ ಕ್ಷೇತ್ರ ಆಧರಿಸಿ ಎಲ್ಲ ರೈತರಿಗೆ ಪರಿಹಾರ ಕೊಡಬೇಕು ಎಂದು ರಾಜ್ಯ ರೈತ ಸಂಘತ ತಾಲ್ಲೂಕು ಅಧ್ಯಕ್ಷ ಪ್ರಕಾಶ ಬಾವುಗೆ ಆಗ್ರಹಿಸಿದ್ದಾರೆ.
ಬೆಳೆ ಹಾನಿ ಕುರಿತು ಜಂಟಿ ಸರ್ವೆ ಪೂರ್ಣಗೊಂಡಿದೆ. ಸರ್ಕಾರ ಪರಿಹಾರ ಘೋಷಿಸಿದ್ದು ನೇರವಾಗಿ ರೈತರಿಗೆ ಅದರ ಲಾಭ ಸಿಗಲಿದೆ. ಈ ವಿಷಯದಲ್ಲಿ ರೈತರು ಆತಂಕ ಪಡಬಾರದುಧುಳಪ್ಪ ಹೊಸಳ್ಳೆ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.