ಬಸವಕಲ್ಯಾಣ: ಅತಿವೃಷ್ಟಿಯಿಂದ ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳಲ್ಲಿ ಸಂಪೂರ್ಣವಾಗಿ ಬೆಳೆ ಹಾನಿ ಆಗಿದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರು ಈಚೆಗೆ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ.
‘ನಾನು ಸ್ವತಃ ತಾಲ್ಲೂಕಿನ ಕೊಹಿನೂರ, ಮಂಠಾಳ, ಮುಡಬಿ, ಪ್ರತಾಪುರ, ಹುಲಸೂರ ಹೋಬಳಿಗಳ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಮೀಕ್ಷಾ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಕೇಳಿಕೊಂಡಿದ್ದೇನೆ. ಎಲ್ಲೆಡೆ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದೆ. ಪಕ್ಕದ ನಾಲೆಗಳ ನೀರು ಅನೇಕ ಹೊಲಗಳಲ್ಲಿ ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ' ಎಂದು ಅವರು ಸಿಎಂ ಅವರಿಗೆ ತಿಳಿಸಿದ್ದಾರೆ.
‘ತೊಗರಿ, ಉದ್ದು, ಹೆಸರು ಮಣ್ಣು ಪಾಲಾಗಿವೆ. ಅಲ್ಪಸ್ವಲ್ಪವೂ ಸರಿಯಾಗಿ ಉಳಿದಿಲ್ಲ. ಬಿತ್ತಿದ ಬೀಜ ಮತ್ತು ಗೊಬ್ಬರದ ಹಣವೂ ವಾಪಸ್ ಬರುವುದಿಲ್ಲ. ಸೋಯಾಬಿನ್ ಸಹ ಹಾಳಾಗಿದೆ. ಆದ್ದರಿಂದ ಕೃಷಿಕ ವರ್ಗ ತೊಂದರೆಯಲ್ಲಿದೆ. ಈ ಕಾರಣ ತಕ್ಷಣದಲ್ಲಿ ಪರಿಹಾರಧನ ಬಿಡುಗಡೆ ಮಾಡಬೇಕು’ ಎಂದು ವಿಜಯಸಿಂಗ್ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.