ADVERTISEMENT

ಬಸವಕಲ್ಯಾಣ: ಕಾಡುಹಂದಿ ದಾಳಿಯಿಂದ ಬೆಳೆ ನಾಶ

ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 16:37 IST
Last Updated 24 ಜೂನ್ 2020, 16:37 IST
ಬಸವಕಲ್ಯಾಣ ತಾಲ್ಲೂಕಿನ ಮಂಗಳೂರ ವ್ಯಾಪ್ತಿಯಲ್ಲಿನ ಕಬ್ಬನ್ನು ಕಾಡುಹಂದಿ ನಾಶಪಡಿಸಿರುವುದು
ಬಸವಕಲ್ಯಾಣ ತಾಲ್ಲೂಕಿನ ಮಂಗಳೂರ ವ್ಯಾಪ್ತಿಯಲ್ಲಿನ ಕಬ್ಬನ್ನು ಕಾಡುಹಂದಿ ನಾಶಪಡಿಸಿರುವುದು   

ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರ ಹೋಬಳಿ ವ್ಯಾಪ್ತಿಯ ಹಂದ್ರಾಳ, ಮಂಗಳೂರ, ಮಲ್ಲಿಕಾರ್ಜುನವಾಡಿಗಳ ವ್ಯಾಪ್ತಿಯಲ್ಲಿ ಕಾಡು ಹಂದಿಗಳು ರಾತ್ರೋರಾತ್ರಿ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ರೈತರಿಗೆ ಅಪಾರ ಪ್ರಮಾಣದ ಹಾನಿ ಆಗುತ್ತಿದೆ.

ಮಂಗಳೂರ ವ್ಯಾಪ್ತಿಯಲ್ಲಿ 500 ಎಕರೆಯಷ್ಟು ಅರಣ್ಯವಿದೆ. 1 ಸಾವಿರ ಎಕರೆ ಸಾಗುವಳಿ ಜಮೀನಿದೆ. ಅರಣ್ಯದಲ್ಲಿನ ಹಂದಿಗಳು ಹಿಂಡುಹಿಂಡಾಗಿ ಹೊಲಗಳಿಗೆ ಹಾಗೂ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸಿವೆ. ಅನೇಕರ ಕಬ್ಬಿನ ದಂಟುಗಳನ್ನು ಕಡಿದು ತಿಂದಿವೆ. ತರಕಾರಿ, ಸೋಯಾಬಿನ್, ತೊಗರಿ, ಹೆಸರು ಹಾಗೂ ಉದ್ದು ಮೊಡಕೆ ಒಡೆಯುವಷ್ಟರಲ್ಲಿಯೇ ಕಿತ್ತು ತಿನ್ನುತ್ತಿವೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ.

‘ಇಲ್ಲಿನ ಕಾಡು ಹಂದಿಗಳ ಹಾವಳಿ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿ ಪಿಕೆಪಿಎಸ್ ಅಧ್ಯಕ್ಷ ತಾತೇರಾವ್ ಪಾಟೀಲ ಮಂಗಳೂರ ಅವರು ಈಚೆಗೆ ಬೆಂಗಳೂರಿನಲ್ಲಿ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ.

ADVERTISEMENT

‘ಎಕರೆಗೆ ಬಿತ್ತನೆ ಕೈಗೊಳ್ಳುವುದಕ್ಕೆ 10 ಸಾವಿರಕ್ಕಿಂತ ಹೆಚ್ಚಿನ ಖರ್ಚು ಬರುತ್ತದೆ. ಒಂದು ವೇಳೆ ಹಂದಿಗಳು ಬೆಳೆ ನಾಶಪಡಿಸಿದರೆ ಇನ್ನೊಮ್ಮೆ ಬಿತ್ತಲು ಆಗುತ್ತದೆಯೇ? ಇದಲ್ಲದೆ ಕಬ್ಬು ಕೂಡ ನಾಶಪಡಿಸುತ್ತಿರುವುದರಿಂದ ಅಪಾರ ಹಾನಿ ಆಗುತ್ತಿದೆ. ಇದಲ್ಲದೆ ಹಂದಿಗಳು ಹಿಂಡು ಹಿಂಡಾಗಿ ಜನರ ಮೇಲೆ ದಾಳಿ ಮಾಡುತ್ತಿರುವ ಕಾರಣ ರೈತರು ಹೊಲಗಳಿಗೆ ಹೋಗುವುದಕ್ಕೂ ಹೆದರುವಂತಾಗಿದೆ. ಆದ್ದರಿಂದ ಅವು ಹೊಲಗಳಿಗೆ ನುಗ್ಗದಂತೆ ಇನ್ನು ಮುಂದೆ ಅರಣ್ಯಕ್ಕೆ ತಂತಿಬೇಲಿ ನಿರ್ಮಿಸಬೇಕು ಇಲ್ಲವೆ ಇತರೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಮಲ್ಲಿಕಾರ್ಜುನ ವಾಡಿ ಗ್ರಾಮದ ವ್ಯಾಪ್ತಿಯಲ್ಲಿಯೂ ಜಗನ್ನಾಥ ಹಾಗೂ ಇತರರ ಹೊಲಗಳಲ್ಲಿನ ಕಬ್ಬನ್ನು ಹಂದಿಗಳು ನಾಶಪಡಿಸಿದ್ದು ಅರಣ್ಯ ಇಲಾಖೆಯವರು ಹಂದಿಗಳ ಹಾವಳಿ ತಡೆಯಬೇಕು’ ಎಂದು ಪ್ರವೀಣ ಪುಣೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.