ADVERTISEMENT

ರೈತರಿಗೆ ಬೆಳೆ ನಷ್ಟ ಪರಿಹಾರ ಶೀಘ್ರ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಮೇ 2020, 14:07 IST
Last Updated 8 ಮೇ 2020, 14:07 IST
ಉಮಾಕಾಂತ ನಾಗಮಾರಪಳ್ಳಿ
ಉಮಾಕಾಂತ ನಾಗಮಾರಪಳ್ಳಿ   

ಬೀದರ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2016ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ಜಿಲ್ಲೆಯ 10 ಹೊಸ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಶೀಘ್ರ ಬೆಳೆ ನಷ್ಟ ಪರಿಹಾರ ದೊರಕಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಚಿಕ್ಕನಾಗಾಂವ, ಔರಾದ್ ತಾಲ್ಲೂಕಿನ ಗುಡಪಳ್ಳಿ, ಭಾಲ್ಕಿ ತಾಲ್ಲೂಕಿನ ಅಟ್ಟರ್ಗಾ, ಬೀರಿ (ಕೆ), ಏಣಕೂರ, ಕೋಸಂ, ಲಂಜವಾಡ, ಬೀದರ್ ತಾಲ್ಲೂಕಿನ ಹೊಕ್ರಾಣ (ಬಿ), ಶ್ರೀಮಂಡಲ ಹಾಗೂ ಹುಮನಾಬಾದ್ ತಾಲ್ಲೂಕಿನ ಜಲಸಂಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 4,233 ರೈತರಿಗೆ ಒಟ್ಟು ₹5.83 ಕೋಟಿ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ.

2016 ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬೆಳೆ ನಷ್ಟ ಪರಿಹಾರ ಹಣ ರೈತರಿಗೆ ಲಭಿಸಿರಲಿಲ್ಲ. ಇದೀಗ ಕೊರೊನಾ ಸೋಂಕಿನಿಂದ ಜಾರಿಗೊಳಿಸಲಾದ ಲಾಕ್‍ಡೌನ್‍ನ ಸಂಕಷ್ಟದ ಸಂದರ್ಭದಲ್ಲಿ ದೊರಕಲಿರುವ ಪರಿಹಾರದಿಂದ ರೈತರಿಗೆ ನೆರವಾಗಲಿದೆ. ಎಲ್ಲರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

2016 ರಿಂದ 2019 ರ ವರೆಗೆ ಬೀದರ್ ಡಿಸಿಸಿ ಬ್ಯಾಂಕ್ ಪ್ರಧಾನಮಂತ್ರಿ ಫಸಲ್ ಬಿಯಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸುವಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ರಾಷ್ಟ್ರಮಟ್ಟದಲ್ಲೂ ಮೊದಲ ಬ್ಯಾಂಕ್ ಆಗಿ ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲೆಯ ರೈತರ ಆರ್ಥಿಕ ಭದ್ರತೆ ಕಾಪಾಡಲು ನಿರಂತರ ಶ್ರಮಿಸುತ್ತಿದೆ ಎಂದು ನಾಗಮಾರಪಳ್ಳಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.