ADVERTISEMENT

‘ಕಲ್ಟ್‌’ ಕಂಪ್ಲೀಟ್‌ ಪ್ಯಾಕೇಜ್‌ ಮೂವಿ: ನಟ ಜೈದ್‌ ಖಾನ್‌

ಜ.23ರಂದು 150 ಚಿತ್ರಮಂದಿರಗಳಲ್ಲಿ ತೆರೆಗೆ; ನಟ ಜೈದ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:18 IST
Last Updated 25 ಡಿಸೆಂಬರ್ 2025, 5:18 IST
ಜೈದ್‌ ಖಾನ್‌
ಜೈದ್‌ ಖಾನ್‌   

ಬೀದರ್‌: ‘ಕಲ್ಟ್‌ ಕಂಪ್ಲೀಟ್‌ ಪ್ಯಾಕೇಜ್‌ ಮೂವಿ’. ರೋಮ್ಯಾಂಟಿಕ್‌ ಥ್ರಿಲ್ಲರ್‌ ಸಿನಿಮಾ ಇದಾಗಿದ್ದು, ಎಲ್ಲಾ ಕನ್ನಡಿಗರು ಚಿತ್ರಮಂದಿರಗಳಲ್ಲಿ ನೋಡಿ ಆಶೀರ್ವದಿಸಬೇಕು ಎಂದು ಈ ಸಿನಿಮಾದ ನಟ ಜೈದ್‌ ಖಾನ್‌ ಮನವಿ ಮಾಡಿದರು.

‘ಲೋಕಿ ಸಿನಿಮಾಸ್‌’ ಬ್ಯಾನರ್‌ನಡಿ ನಿರ್ಮಿಸಿರುವ ಈ ಚಿತ್ರಕ್ಕೆ ಅನಿಲ್‌ಕುಮಾರ್‌ ನಿರ್ದೇಶನ ಮಾಡಿದ್ದಾರೆ. ರಚಿತಾ ರಾಮ್‌ ಹಾಗೂ ಮಲೈಕಾ ಯಶಪಾಲ್‌ ಈ ಚಿತ್ರದ ಸಹನಟಿಯರು. ಬರುವ ಜನವರಿ 23ರಂದು ರಾಜ್ಯದಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಚಿತ್ರದ ಮೂರು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸಣ್ಣಪುಟ್ಟ ಕೆಲಸ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಮುಗಿಯಲಿದೆ. ಕರ್ನಾಟಕದಲ್ಲೇ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದರು.

ADVERTISEMENT

ಇದು ನಾನು ನಟಿಸಿರುವ ಎರಡನೇ ಚಿತ್ರ. ಮೊದಲ ಚಿತ್ರ ‘ಬನಾರಸ್‌’. ನನ್ನ ತಂದೆ ರಾಜಕಾರಣದಲ್ಲಿದ್ದರೂ ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ. ಮೊದಲಿನಿಂದಲೂ ನಟನೆಯ ಬಗ್ಗೆ ಒಲವು. ಅಣ್ಣಾ ಡಾ. ರಾಜಕುಮಾರ್‌ ಅವರು ನನಗೆ ಸ್ಫೂರ್ತಿ. ಅವರ ತೊಡೆ ಮೇಲೆ ಬೆಳೆದಿದ್ದೇನೆ. ನಟನೆಗೆ ಬರಲು ಅವರೇ ಕಾರಣ ಎಂದರು.

ಉತ್ತರ ಕರ್ನಾಟಕದಲ್ಲಿ ಅನೇಕ ಜನ ಉತ್ತಮ ಕಲಾವಿದರು ಇದ್ದಾರೆ. ನನ್ನ ಮುಂದಿನ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಒಬ್ಬ ಕಲಾವಿದನಿಗೆ ಅವಕಾಶ ಕೊಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಹಾಸ್ಯನಟ ಅಕ್ಬರ್ ಬಿನ್ ಕವರ್, ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಪ್ರಮುಖರಾದ ಫಿರೋಜ್ ಖಾನ್, ನವಾಜ್, ಯುಸೂಫ್ ಖಾನ್, ಇಮ್ರಾನ್ ಖಾನ್, ಸಮೀರ್ ಖಾನ್, ಹ್ಯಾರಿಸ್ ಹಾಜರಿದ್ದರು.

ಅಯಾಜ್‌ ಖಾನ್‌
ನಟ ಜೈದ್‌ ಖಾನ್‌ ಅವರು ಕನ್ನಡದಲ್ಲಿ ಉತ್ತಮವಾದ ಸಿನಿಮಾ ಮಾಡಿದ್ದಾರೆ. ಎಲ್ಲರೂ ಅದನ್ನು ನೋಡಿ ಯಶಸ್ವಿಗೊಳಿಸಬೇಕು.
ಅಯಾಜ್‌ ಖಾನ್‌ ಮುಖಂಡ

‘ಮೈನಾರಿಟಿ ಇದ್ದರೂ ಕನ್ನಡದಲ್ಲಿ ಮಾತಾಡಿ’

‘ಕನ್ನಡ ಉತ್ತಮವಾದ ಭಾಷೆ. ದಯವಿಟ್ಟು ಎಲ್ಲರೂ ಕನ್ನಡದಲ್ಲಿ ಮಾತನಾಡಬೇಕು. ಮೈನಾರಿಟಿ ಇದ್ದರೂ ಕನ್ನಡದಲ್ಲಿ ಮಾತಾಡಿ. ಕನ್ನಡ ಇಂಡಸ್ಟ್ರಿ ಸಾಯಲು ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇಲ್ಲದಿರುವುದು. ನೆರೆಯ ತಮಿಳುನಾಡು ಕೇರಳದಲ್ಲಿ ಭಾಷೆಯ ಬಗ್ಗೆ ಎಷ್ಟೊಂದು ಅಭಿಮಾನ ಇದೆ. ಅವರನ್ನು ನೋಡಿ ನಾವು ಕಲಿಯಬೇಕಿದೆ’ ಎಂದು ನಟ ಜೈದ್‌ ಖಾನ್‌ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಕನ್ನಡದಲ್ಲಿ ಉತ್ತಮ ಸಿನಿಮಾ ಮಾಡಿದರೆ ಈಗಲೂ ಜನ ಚಿತ್ರಮಂದಿರಗಳಿಗೆ ಬರುತ್ತಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಒಂದಾಗಿದೆ. ಎಲ್ಲರೂ ಕೂಡಿ ಕೆಲಸ ಮಾಡುತ್ತಿಲ್ಲ. ಎಲ್ಲರೂ ಒಂದಾಗಿ ಮಾಡಿದರೆ ಹೊಸ ಕಥೆಯ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.