ADVERTISEMENT

ದಯೆ, ಕರುಣೆ ಗುಣ ಬೆಳೆಸಿಕೊಳ್ಳಿ

ವಿಶ್ವ ದಾದಿಯರ ದಿನಾಚರಣೆ: ಬೆಲ್ದಾಳ ಸಿದ್ಧರಾಮ ಶರಣರ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:18 IST
Last Updated 12 ಮೇ 2022, 15:18 IST
ಬೀದರ್‌ನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮದಲ್ಲಿ ಆಯೋಜಿಸಿದ್ದ ದಯೆ ಮತ್ತು ಕರುಣೆಗಾಗಿ ಆಧ್ಯಾತ್ಮಿಕ ಸಶಕ್ತೀಕರಣ ಹಾಗೂ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಬೆಲ್ದಾಳ ಸಿದ್ಧರಾಮ ಶರಣರು ಉದ್ಘಾಟಿಸಿದರು
ಬೀದರ್‌ನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮದಲ್ಲಿ ಆಯೋಜಿಸಿದ್ದ ದಯೆ ಮತ್ತು ಕರುಣೆಗಾಗಿ ಆಧ್ಯಾತ್ಮಿಕ ಸಶಕ್ತೀಕರಣ ಹಾಗೂ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಬೆಲ್ದಾಳ ಸಿದ್ಧರಾಮ ಶರಣರು ಉದ್ಘಾಟಿಸಿದರು   

ಬೀದರ್: ದಯೆ, ಕರುಣೆ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಕೌಠಾದ ಬಸವ ಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ಸಲಹೆ ಮಾಡಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮ ಕೇಂದ್ರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ದಯೆ ಮತ್ತು ಕರುಣೆಗಾಗಿ ಆಧ್ಯಾತ್ಮಿಕ ಸಶಕ್ತೀಕರಣ ಹಾಗೂ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಶಿಕ್ಷಿತರೇ ಕ್ರೂರಿಯಾಗುತ್ತಿದ್ದಾರೆ. ದಯೆ, ಕರುಣೆ, ಶಾಂತಿ ಮಾಯವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸದ್ಗುಣಗಳಿಂದ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮ ಕೇಂದ್ರದ ಸಂಚಾಲಕಿ ಪ್ರತಿಮಾ ಬಹೆನ್‍ಜಿ ಮಾತನಾಡಿ, ಮನುಷ್ಯರನ್ನು ವ್ಯಸನಮುಕ್ತರಾಗಿಸುವುದು, ದಯೆ, ಕರುಣೆ ಮೂಲಕ ಅವರಲ್ಲಿ ಪರಿವರ್ತನೆ ತರುವುದು ಆಧ್ಯಾತ್ಮಿಕ ಸಶಕ್ತೀಕರಣ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
2022-23ನೇ ಸಾಲಿನಲ್ಲಿ ರಾಷ್ಟ್ರದಾದ್ಯಂತ ಮಾದಕ ವ್ಯಸನಗಳ ದುಷ್ಪರಿಣಾಮ, ದಯೆ, ಕರುಣೆ ಜಾಗೃತಿ ಮೂಡಿಸಲು ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಪ್ರತಿ ದಿನ 30 ಸಾವಿರ ಯುವಕರು ಕ್ಯಾನ್ಸರ್‍ಗೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್‍ಗೆ ಕಾರಣವಾಗುವ ಗುಟ್ಕಾಗಳು ಬೀದರ್‍ನಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಎಸ್.ಎಸ್. ಸಿದ್ಧಾರೆಡ್ಡಿ ಫೌಂಡೇಷನ್‍ನ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಹೇಳಿದರು.
ತೋರಿಕೆಯ ಜೀವನ ಬಹಳ ದಿನ ನಡೆಯುವುದಿಲ್ಲ. ನಡೆ, ನುಡಿ ಒಂದಾಗಿಸಿಕೊಳ್ಳಬೇಕು. ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವವರಿಗೆ ದೇವರು ಖಂಡಿತ ಫಲ ಕೊಡುತ್ತಾನೆ ಎಂದು ನುಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ, ಪಾವನಧಾನ ಕೇಂದ್ರದ ಬಿ.ಕೆ. ಪ್ರಭಾಕರ, ಬಿ.ಕೆ. ಜ್ಯೋತಿ ಬಹೆನ್‍ಜಿ ಮಾತನಾಡಿದರು.
ದಾದಿಯರಾದ ರೇಣುಕಾ, ಸವಿತಾ, ಮಂಜುಳಾ ಹಾಗೂ ಡಾ. ಶಾಂತಲಾ ಕೌಜಲಗಿ ಅವರನ್ನು ಸನ್ಮಾನಿಸಲಾಯಿತು. ಸುಷ್ಮಾ ಆಕರ್ಷಕ ಭರತನಾಟ್ಯ ಪ್ರದರ್ಶಿಸಿದರು. ಗುರುದೇವಿ ಬಹೆನ್‍ಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.