ADVERTISEMENT

ಪರಿಸರ ರಕ್ಷಣೆ ಜಾಗೃತಿಗಾಗಿ ರಾಜಸ್ಥಾನದ ಯುವಕನ ಸೈಕಲ್‌ ಪ್ರವಾಸ

28 ಸಾವಿರ ಕಿ.ಮೀ ಪ್ರಯಾಣಿಸಿದ ನರಪತಸಿಂಗ್ ರಾಜಪುರೋಹಿತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 13:15 IST
Last Updated 18 ಡಿಸೆಂಬರ್ 2021, 13:15 IST
ಪರಿಸರ ರಕ್ಷಣೆ ಜಾಗೃತಿಗಾಗಿ ಸೈಕಲ್‌ ಮೇಲೆ ಪ್ರವಾಸ ಹೊರಟಿರುವ ನರಪತಸಿಂಗ್ ರಾಜಪುರೋಹಿತ
ಪರಿಸರ ರಕ್ಷಣೆ ಜಾಗೃತಿಗಾಗಿ ಸೈಕಲ್‌ ಮೇಲೆ ಪ್ರವಾಸ ಹೊರಟಿರುವ ನರಪತಸಿಂಗ್ ರಾಜಪುರೋಹಿತ   

ಬೀದರ್‌: ‘ಜೀವ ಸಂಕುಲಕ್ಕೆ ಅಗತ್ಯವಿರುವ ಪರಿಸರ ಸಂರಕ್ಷಣೆ’ ಮಾಡಿ ಎಂದು ಘೋಷಣೆಯೊಂದಿಗೆ ಸೈಕಲ್‌ ಮೇಲೆ ಹೊರಟಿರುವ ನರಪತಸಿಂಗ್ ರಾಜಪುರೋಹಿತ ಈಚೆಗೆ ಬೀದರ್‌ ಜಿಲ್ಲೆಗೆ ಬಂದು ಜಾಗೃತಿ ಕೈಗೊಂಡು ಮತ್ತೆ ಪ್ರಯಾಣ ಬೆಳೆಸಿದರು.

‘ಇಂದು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಅನೇಕ ಜೀವರಾಶಿಗಳು ನಾಶವಾಗುತ್ತಿವೆ. ಪ್ರತಿಯೊಂದು ಜೀವ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ’ ಎಂದು ರಾಜಸ್ಥಾನದ ಲಂಗೇರಾ ಹಳ್ಳಿಯ ನರಪತ ಸಿಂಗ್ ರಾಜಪುರೋಹಿತ ಹೇಳಿದರು.

ನಗರದ ಬರೀದಶಾಹಿ ಉದ್ಯಾನದಲ್ಲಿ ಬೀದರ್‌ನ ಪತಂಜಲಿ ಯೋಗ ಸಮಿತಿ ಸೇರಿದಂತೆ ವಿವಿಧ ಘಟಕಗಳಿಂದ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ADVERTISEMENT

‘ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನರಿಗೆ ಪರಿಸರದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಸೈಕಲ್ ಯಾತ್ರೆ ಹೊರಟಿದ್ದೇನೆ’ ಎಂದು ತಿಳಿಸಿದರು.

‘ಈವರೆಗೆ 28000 ಕಿ.ಮೀ. ದಾರಿ ಕ್ರಮಿಸಿದ್ದೇನೆ. 15 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಕಲ್ ಯಾತ್ರೆ ಕೈಗೊಂಡಿದ್ದೇನೆ. ಉಳಿದ ರಾಜ್ಯಗಳಿಗೂ ಕೂಡ ಭೇಟಿಕೊಡಲಿದ್ದೇನೆ. ಅಪಘಾತದಿಂದ ಬಲಗಾಲಿಗೆ ಪೆಟ್ಟಾಗಿ 38 ಹೊಲಿಗೆಗಳನ್ನು ಹಾಕಿಸಿಕೊಂಡಿದ್ದೇನೆ. ಶೇಕಡ 10ರಷ್ಟು ಅಂಗ ವೈಕಲ್ಯವಿದೆ. ಆದರೂ ಆತ್ಮವಿಶ್ವಾಸದಿಂದ ಮುಂದೆ ಸಾಗಿದ್ದೇನೆ’ ಎಂದು ಹೇಳಿದರು.

ಯೋಗಸಾಧಕ ಧೋಂಡಿರಾಮ ಚಾಂದಿವಾಲೆ, ಯೋಗೇಂದ್ರ ಯದಲಾಪುರೆ, ಡಾ.ನಂದಕುಮಾರ ತಾಂದಳೆ, ಡಾ. ಸಂಗಮೇಶ ಮಂಗಲಗಿ, ಹಣಮಂತ ತೇಲಿ, ರವೀಂದ್ರ ತೆಲಗಾಣಿ, ಚಂದ್ರಶೇಖರ ಗಾದಾ, ಶಂಕರರಾವ ಚಿದ್ರಿ, ರವಿ ಸ್ವಾಮಿ ದಂಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.