ADVERTISEMENT

ದಾಸಿಮಯ್ಯ ಶರಣರಗಿಂತ ಪೂರ್ವದವರು

ಮುದನೂರು ಸಂಸ್ಥಾನ ಮಠದ ಡಾ.ಈಶ್ವರಾನಂದ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 2:53 IST
Last Updated 20 ಡಿಸೆಂಬರ್ 2021, 2:53 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಆದ್ಯ ವಚನಕಾರ ದೇವರ ದಾಸಿಮಯ್ಯ ವಿಚಾರ ಸಂಕಿರಣದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಈಶ್ವರಾನಂದ ಸ್ವಾಮೀಜಿ, ಡಾ.ಜಿ.ಎಸ್.ಭುರಳೆ ಸೇರಿ ಹಲವರು ಇದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಆದ್ಯ ವಚನಕಾರ ದೇವರ ದಾಸಿಮಯ್ಯ ವಿಚಾರ ಸಂಕಿರಣದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಈಶ್ವರಾನಂದ ಸ್ವಾಮೀಜಿ, ಡಾ.ಜಿ.ಎಸ್.ಭುರಳೆ ಸೇರಿ ಹಲವರು ಇದ್ದರು   

ಬಸವಕಲ್ಯಾಣ: ‘ದೇವರ ದಾಸಿಮಯ್ಯನವರು ಬಸವಾದಿ ಶರಣರಿಗಿಂತ ಪೂರ್ವದವರಾಗಿದ್ದು, ಆದ್ಯ ವಚನಕಾರರಾಗಿದ್ದಾರೆ. ಇವರನ್ನು ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ, ಮುದನೂರಿನ ದಾಸಿಮಯ್ಯ, ತವನಿಧಿಯ ದಾಸಿಮಯ್ಯ ಎಂತಲೂ ಕರೆಯಲಾಗುತ್ತದೆ’ ಎಂದು ಮುದನೂರು ದೇವರ ದಾಸಿಮಯ್ಯ ಮಹಾ ಸಂಸ್ಥಾನ ಮಠದ ಟ್ರಸ್ಟ್‌ನ ಅಧ್ಯಕ್ಷ ಡಾ.ಈಶ್ವರಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕು ಹಟಗಾರ ಸಮಾಜ ಸಂಘ ಹಾಗೂ ಮುದನೂರು ದೇವರ ದಾಸಿಮಯ್ಯ ಮಹಾ ಸಂಸ್ಥಾನ ಮಠದ ಟ್ರಸ್ಟ್‌ನಿಂದ ನಗರದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಆದ್ಯ ವಚನಕಾರ ದೇವರ ದಾಸಿಮಯ್ಯ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾಸಿಮಯ್ಯನವರ ವಚನಗಳಲ್ಲಿ ಸಾಮಾಜಿಕ ಸಮಾನತೆ, ಲಿಂಗ, ಜಾತಿ ಸಮಾನತೆ ಪ್ರತಿಪಾದನೆಯಾಗಿದೆ. ಇಷ್ಟಲಿಂಗ ಪೂಜೆ ಸ್ವತಃ ಮಾಡಬೇಕಲ್ಲದೆ ಯಾರಿಂದಲೂ ಮಾಡಿಸಬಾರದು ಎಂದೂ ಅವರು ಬಲವಾಗಿ ಹೇಳಿದ್ದಾರೆ. ಭಕ್ತಿ, ನೈತಿಕತೆ, ಧರ್ಮಾಚರಣೆ ಬಗ್ಗೆ ಹೇಳಿ ಮೂಢನಂಬಿಕೆ, ಕಂದಾಚಾರವನ್ನು ಖಂಡಿಸಿದ್ದಾರೆ’ ಎಂದರು.

ADVERTISEMENT

‘ಅವರ ಕಾಯಕಸ್ಥಳವಾದ ಮುದನೂರನ್ನು ಪುಣ್ಯಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಮಾಜ ಬಾಂಧವರು ವರ್ಷಕ್ಕೊಮ್ಮೆಯಾದರೂ ಅಲ್ಲಿಗೆ ಭೇಟಿ ನೀಡಬೇಕು’ ಎಂದು ಕೇಳಿಕೊಂಡರು. ಟ್ರಸ್ಟ್ ಕಾರ್ಯದರ್ಶಿ ರಾಮಸ್ವಾಮಿ ಮಾತನಾಡಿ,‘ಮುದನೂರ ಮಹಾ ಸಂಸ್ಥಾನ ಮಠದ ಪರಂಪರೆ ದೊಡ್ಡದಿದೆ’ ಎಂದರು.

ಉದ್ಘಾಟನೆ ನೆರವೇರಿಸಿದ ತಾಲ್ಲೂಕು ಹಟಗಾರ ಸಮಾಜ ಸಂಘದ ಅಧ್ಯಕ್ಷ ಡಾ.ಜಿ.ಎಸ್.ಭುರಳೆ ಮಾತನಾಡಿ,‘ಸಮಾಜ ಸಂಘಟನೆ ಬಲಗೊಳ್ಳಲಿ, ದೇವರ ದಾಸಿಮಯ್ಯನವರ ತತ್ವದ ಪಾಲನೆ ಆಗಲಿ’ ಎಂದರು.

ನೇಕಾರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಅಮಲಾಪುರೆ ಮಾತನಾಡಿ,‘ಸಮಾಜ ಬಾಂಧವರು ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬೇಕು’ ಎಂದರು.

ಪ್ರಮುಖರಾದ ಮಹೇಶ ಸುಂಟನೂರೆ, ಸೂರ್ಯಕಾಂತ ಅಡಕೆ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವನಾಥ ಕೋಟೆ, ಪ್ರಶಾಂತ ಶೆಂದ್ರೆ, ಮಾಧವ ಚೌಡೇಕರ, ರಾಜಕುಮಾರ ಚಂದಾ, ಶರಣಪ್ಪ ಮೆಂಗದೆ, ದಿಲೀಪ ರುಮ್ಮಾ, ಬಸವಂತಪ್ಪ ಭುರಳೆ, ಬಾಬು ಹೆಗ್ಗೆ, ಅಶೋಕ ಹಿಪ್ಪರಗೆ, ಸೋಮನಾಥ ಮತಗುಂಡೆ, ಬಸವರಾಜ, ಶಂಕರ ಹೊಳಗೆ, ಸೂರ್ಯಕಾಂತ ಭುರಳೆ, ಸಚಿನ, ಬಸಣ್ಣ ಧನ್ನೂರೆ, ಕಾಶಪ್ಪ ಕಡಗಂಚಿ, ಬಸವರಾಜ ಬಂದಗೆ, ಶಂಕರ ಮ್ಯಾಕಾ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.