
ಬೀದರ್: ನಿಯಮ ಮೀರಿ ಪಥ ಸಂಚಲನ ನಡೆಸಿರುವ ಆರ್‌ಎಸ್‌ಎಸ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ (ಅಂಬೇಡ್ಕರ್ ವಾದ) ಆಗ್ರಹಿಸಿದೆ.
ಈ ಸಂಬಂಧ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು, ಮನುವಾದಿ ಸಂಘಟನೆ ಆರ್‌ಎಸ್‌ಎಸ್ ದೇಶದಲ್ಲಿ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ. ಅಸಮಾನತೆಯನ್ನು ಪೋಷಿಸುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ಸಂಘಟನೆ ಎಂದು ಅಂದೇ ಡಾ.ಬಿ.ಆರ್. ಅಂಬೇಡ್ಕರ್ ಅವರು ಎಚ್ಚರಿಸಿದ್ದರು. ಈ ಸಂಘಟನೆ ನಿರಂತರವಾಗಿ ಸಂವಿಧಾನ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ ಹಾಗೂ ಬೀದರ್ ವಿಶ್ವವಿದ್ಯಾಲಯಕ್ಕೆ ‘ಬಸವೇಶ್ವರ ವಿಶ್ವವಿದ್ಯಾಲಯ’ ಎಂದು ಹೆಸರಿಡಬೇಕು ಎಂದು ಆಗ್ರಹಿಸಿದರು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ, ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ, ವಿಭಾಗ ಸಂಘಟನಾ ಸಂಚಾಲಕ ರಾಕುಮಾರ ಬನ್ನೇರ, ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕಿ ರಂಜೀತಾ ಜೈನೂರ, ಝರೆಪ್ಪಾ ರಾಂಪೂರೆ, ಬಾಬು ಮಾಲೆ, ಸಂಜಿವಕುಮಾರ ಬ್ಯಾಗಿ, ಗೌತಮ ಸಾಗರ, ಗೋಪಾಲ ಸಾಗರ, ಬಸವರಾಜ ಕಾಂಬಳೆ, ನಾಗೇಶ ಜನವಾಡ, ಬಸವರಾಜ ಕೋಳಾರ, ಶ್ರೀಕಾಂತ ಸಾಗರ, ಗೌತಮ ಭೋಸ್ಲೆ, ಅಂಬೇಡ್ಕರ್ ಸಾಗರ, ನರಸಿಂಗ್ ಸಾಮ್ರಾಟ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.