ADVERTISEMENT

ಕಮಲನಗರ | ಸೇತುವೆಯ ಎರಡೂ ಬದಿ ತಗ್ಗು: ಅಪಾಯದ ನಡುವೆ ಸಂಚಾರ!

ಜೀವ ಕೈಯಲ್ಲಿ ಹಿಡಿದು ಪ್ರಯಾಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:58 IST
Last Updated 9 ಅಕ್ಟೋಬರ್ 2025, 4:58 IST
ಕಮಲನಗರ ತಾಲ್ಲೂಕಿನ ಹಕ್ಯಾಳ ಗ್ರಾಮದ ಬಳಿಯ ಸೇತುವೆಯಲ್ಲಿ ತಗ್ಗುಗಳು ಬಿದ್ದಿರುವುದು.
ಕಮಲನಗರ ತಾಲ್ಲೂಕಿನ ಹಕ್ಯಾಳ ಗ್ರಾಮದ ಬಳಿಯ ಸೇತುವೆಯಲ್ಲಿ ತಗ್ಗುಗಳು ಬಿದ್ದಿರುವುದು.   

ಕಮಲನಗರ: ತಾಲ್ಲೂಕಿನ ಹಕ್ಯಾಳ ಗ್ರಾಮದಲ್ಲಿಯ ಮುಖ್ಯ ರಸ್ತೆಯಲ್ಲಿಯ ಸೇತುವೆಯ ಎರಡೂ ಬದಿ ದೊಡ್ಡ ಪ್ರಮಾಣದ ತಗ್ಗು ಬಿದ್ದಿದ್ದು ಜನ ಅಪಾಯದ ಅಂಚಿನಲ್ಲೇ ಸಂಚರಿಸುತ್ತಿದ್ದಾರೆ. 

ಈಚೆಗೆ ಭಾರಿ ಸುರಿದ ಪರಿಣಾಮ ಸೇತುವೆಯ ಒಂದು ಭಾಗದಲ್ಲಿ ತಗ್ಗು ಬಿದ್ದಿತ್ತು ಈಗ ಮತ್ತೊಂದು ಬದಿಯಲ್ಲಿಯೂ ತಗ್ಗು ನಿರ್ಮಾಣವಾಗಿದೆ. ಈ ಸೇತುವೆಯನ್ನು ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿದ್ದು ಈಗ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ ಎನ್ನುತ್ತಾರೆ ಹಕ್ಯಾಳ ಗ್ರಾಮದ ನಿವಾಸಿಗಳು.

ಈ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈಗ ಸರ್ಕಾರಿ ಬಸ್ ಸೇರಿದಂತೆ ಭಾರವಾದ ವಾಹನಗಳು ಸೇತುವೆ ಮೇಲಿಂದ ಸಂಚರಿಸುತ್ತಿಲ್ಲ. ಇದರಿಂದ ದಾಬಕಾ, ಮುರ್ಕಿ, ಹಂದಿಕೇರ, ವಾಗನಗೀರಾ, ಮುರ್ಕಿವಾಡಿ ಹಾಗೂ ಇನ್ನೀತರ ಗ್ರಾಮಗಳ ಜನರು ತಮ್ಮ ಕೆಲಸ ಕಾರ್ಯಗಳಿಗೆ ಕಮಲನಗರ ತಾಲ್ಲೂಕು ಕೇಂದಕ್ಕೆ ಹೋಗಿ ಬರಲು ತೊಂದೆಯಾಗುತ್ತಿದೆ. ಸಣ್ಣ-ಪುಟ್ಟ ವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ.

ADVERTISEMENT

ಕೂಡಲೇ ಹೊಸ ಸೇತುವೆ ನಿರ್ಮಿಸಿಕೊಡುವ ಮೂಲಕ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹಕ್ಯಾಳ ಗ್ರಾಮದ ಸಂಜುಕುಮಾರ ಬಿರಾದಾರ, ಅಜಯ ಬಿರಾದಾರ, ಸಂತೋಷ ಬಿರಾದಾರ, ಶಿವಕುಮಾರ ಹಲಮಂಡಗೆ, ಸಂಜುಕುಮಾರ ಮನ್ಮಥಪ್ಪಾ, ಮಹಾದೇವ ಹಲಮಂಡಗೆ ಆಗ್ರಹಿಸಿದ್ದಾರೆ.

ಹಕ್ಯಾಳ ಗ್ರಾಮದಲ್ಲಿಯ ಮುಖ್ಯ ರಸ್ತೆಯಲ್ಲಿನ ಸೇತುವೆ ಮೇಲೆ ತಗ್ಗುಗಳು ನಿರ್ಮಾಣಗೊಂಡಿದ್ದು ಕುಸಿಯುವ ಹಂತದಲ್ಲಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಹೊಸ ಸೇತುವೆ ನಿರ್ಮಿಸಿಕೊಡಬೇಕು. 
– ಕಿರಣ ಪಾಟೀಲ, ಹಕ್ಯಾಳ ನಿವಾಸಿ 
ಸೇತುವೆಯಲ್ಲಿ ತಗ್ಗು ಬಿದ್ದಿರುವುದು ಗಮನಕ್ಕೆ ಬಂದಿದ್ದು ತಾತ್ಕಾಲಿಕವಾಗಿ ತಗ್ಗಿನಲ್ಲಿ ಮುರುಮ ಹಾಕಲಾಗಿದೆ. ಈ ಭಾಗದ ರಸ್ತೆಯೂ ಹದಗೆಟ್ಟಿದ್ದು ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ಹಾಗೂ ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು.
–ರಮೇಶಕುಮಾರ ಕೋಟೆ, ಲೋಕೋಪಯೋಗಿ ಇಲಾಖೆ. ಸಹಾಯಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.